ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಯಾದ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಮ್ಮೆ ಸಿನಿ ಪ್ರೇಕ್ಷಕರನ್ನು “O2” ಎಂಬ ಹೊಸ ಚಿತ್ರದ ಮೂಲಕ ರಂಜಿಸಲು ಸಜ್ಜಾಗಿದೆ. 2024 ಏಪ್ರಿಲ್ 19ರಂದು ತೆರೆ ಕಾಣಲು ಸಜ್ಜಾಗಿರುವ “O2”, ಒಂದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್. ಈ ಕಥೆಯು ಕೇವಲ ಥ್ರಿಲ್ಲರ್ ಅಂಶಗಳನ್ನಷ್ಟೇ ಅಲ್ಲದೆ, ಪ್ರೀತಿ-ಪ್ರೇಮದ ಅಂಶಗಳನ್ನೂ ಒಳಗೊಂಡಿರುವುದು ವಿಶೇಷ ಸಂಗತಿ. ಹಾಗಾಗಿ ಈ ಚಿತ್ರವನ್ನು “ಲವ್ ಥ್ರಿಲ್ಲರ್” ಎಂದು ಕೂಡ ಪರಿಗಣಿಸಬಹುದು.
ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿರುವ ಪಿ.ಆರ್.ಕೆ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಲ್ಲಿ ನಿಸ್ಸೀಮರು. “O2” ಪಿ.ಆರ್.ಕೆ ಬ್ಯಾನರ್ ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣದ ಹತ್ತನೇ ಚಿತ್ರ. ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವನ್ನು ಪ್ರಶಾಂತ್ ರಾಜ್ ಮತ್ತು ಚಿತ್ರದ ನಾಯಕ ರಾಘವ್ ನಾಯಕ್ ನಿರ್ದೇಶಿಸಿರುತ್ತಾರೆ.
“O2” ಬಹಳ ವಿಭಿನ್ನವಾದ ಕಥಾಹಂದರವನ್ನು ಹೊಂದಿರುವಂತಹ ಚಿತ್ರ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಆದ್ಯ ಕರ್ತವ್ಯ ಎಂದು ನಂಬುವ ಶ್ರದ್ಧಾ (ಆಶಿಕಾ ರಂಗನಾಥ್), ತನ್ನ ಸಂಶೋಧನೆಯ ಫಲವಾದ “O2” ಎಂಬ ಡ್ರಗ್ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಈ ಎಲ್ಲಾ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಶ್ರದ್ಧಾಳಿಗೆ ಸಾಧ್ಯವಾಗುವುದೋ ಇಲ್ಲವೋ ಎಂಬುದನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡಿ ತಿಳಿದುಕೊಳ್ಳಬೇಕಿದೆ. ಒಟ್ಟಾರೆ “O2” ಚಿತ್ರ ಮನರಂಜನೆ, ವಿಜ್ಞಾನ, ಪ್ರೀತಿ, ಅನಿರೀಕ್ಷಿತ ತಿರುವುಗಳ ಸಮಾಗಮ ಎಂದರೆ ಉತ್ಪ್ರೇಕ್ಷೆಯಲ್ಲ.
ಚಿತ್ರದ ನಿರ್ಮಾಪಕಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, “O2″ ಎಂಬ ವಿಭಿನ್ನವಾದ ಚಿತ್ರವನ್ನು ನಿರ್ಮಿಸಿರುವುದು ನಮಗೆ ಹೆಮ್ಮೆ ತಂದಿದೆ. ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದ ಕಾಯುತ್ತಿದ್ದೇನೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ನಮ್ಮ ಸಂಸ್ಥೆಯಿಂದ ಮೂಡಿಬರುತ್ತಿರುವ ಈ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಹಾಗೂ ಭಾರಿ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ನಂಬಿದ್ದೇನೆ” ಎಂದರು. ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಇನ್ನಿತರ ಮಾಹಿತಿಯನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಸೋಷಿಯಲ್ ಮೀಡಿಯಾ ಚಾನೆಲ್ ಗಳಲ್ಲಿ ಮತ್ತು ವೆಬ್ ಸೈಟ್ ನಲ್ಲಿ ತಿಳಿದುಕೊಳ್ಳಬಹುದು.
ಇದನ್ನೂ ಓದಿ : ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 33ನೇ ಸಿನಿಮಾ ಅನೌನ್ಸ್ – ಹೊಸ ಪ್ರಾಜೆಕ್ಟ್ನ ಫಸ್ಟ್ ಲುಕ್ಗೆ ಫ್ಯಾನ್ಸ್ ಫಿದಾ..!