ಸ್ಟಾರ್ ಹೀರೋಯಿನ್ ಸಮಂತಾ – ನಾಗ ಚೈತನ್ಯ ದಾಂಪತ್ಯ ಜೀವನ ಮುರಿದುಕೊಂಡು ಇಬ್ಬರು ವಿಚ್ಛೇದನ ಪಡೆದು ದೂರವಾಗಿ ಬಹಳ ದಿನಗಳಾಗಿವೆ. ಆದರೂ ಇವರ ಡಿವೋರ್ಸ್ ಸುದ್ದಿ ಮಾತ್ರ ಇಂದಿಗೂ ಸದ್ದು ಮಾಡುತ್ತಲೇ ಇದೆ. ಈ ಕಹಿ ಘಟನೆ ಸಮಂತಾ ಅವರನ್ನು ಒಂದಲ್ಲಾ ಒಂದು ರೂಪದಲ್ಲಿ ಕಾಡುತ್ತದೆ. ಇತ್ತೀಚಿಗೆ ಸಮಂತಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆ ಎದುರಾಗಿದೆ.
ಈ ಸ್ಟಾರ್ ಜೋಡಿ 2018 ರಲ್ಲಿ ವಿವಾಹವಾಗಿ ವೈಯಕ್ತಿಕ ಕಾರಣಗಳಿಂದ 2021 ರಲ್ಲಿ ವಿಚ್ಛೇದನವನ್ನು ಘೋಷಿಸಿದರು. ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಇಬ್ಬರೂ ಲಂಡನ್ ಹೋಟೆಲ್ ಒಂದರಲ್ಲಿ ಸಿಕ್ಕಿ ಕೂಡ ಬಿದ್ದಿದ್ದರು. ಇದೇ ಕಾರಣಕ್ಕೆ ನಾಗಚೈತನ್ಯ ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.
ಕಳೆದ ವರ್ಷ ಸಮಂತಾ ಅಭಿನಯದ ಶಾಕುಂತಲಂ ಮತ್ತು ಖುಷಿ ಚಿತ್ರಗಳು ಬಿಡುಗಡೆಯಾಗಿದ್ದವು. ಆ ಬಳಿಕ ಸಮಂತಾ ಕೆಲದಿನಗಳಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಈಗ ಸಮಂತಾ ಅವರು ಅಲ್ಲು ಅರ್ಜುನ್‌ಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪುಷ್ಪ 2 ಚಿತ್ರದ ನಂತರ ಅಲ್ಲು ಅರ್ಜುನ್ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರಂತೆ. ಈ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಸಮಂತಾ ಇತ್ತೀಚೆಗೆ ಪಾಡ್‌ಕಾಸ್ಟ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ನೆಟ್ಟಿಗರೊಬ್ಬರು ‘ನಿನ್ನ ಅಮಾಯಕ ಪತಿ ನಾಗ ಚೈತನ್ಯನಿಗೆ ಯಾಕೆ ಮೋಸ ಮಾಡಿದೆ?’ ಎಂದು ಕೇಳಿದ್ದಾರೆ. ನೆಟ್ಟಿಗರು ತಮ್ಮ ಈ ಪ್ರಶ್ನೆಯಿಂದ ಸಮಂತಾ ಅವರನ್ನು ನೋಯಿಸಿದ್ದಾರೆ. ಈ ಪ್ರಶ್ನೆಗೆ ಸಮಂತಾ ಉತ್ತರಿಸಿದ್ದಾರೆ. “ಈ ಪ್ರಶ್ನೆ ಒಳ್ಳೆಯದಲ್ಲದಿರಬಹುದು. ಎನಿವೇ ಐ ವಿಶ್ ಯು ವೆಲ್” ಎಂದು ಹೇಳಿದ್ದಾರೆ. ಇದಕ್ಕೆ ಸಮಂತಾ ಅಭಿಮಾನಿಗಳು ಅಸಮಧಾನ ಹೊರಹಾಕಿದ್ದಾರೆ. ತೀರಾ ಪರ್ಸನಲ್ ವಿಷಯದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ಕೆಲವರು ಸಮಂತಾ ಅವರನ್ನು ಬೆಂಬಲಿಸಿದ್ದಾರೆ.