ಬೀಜಿಂಗ್ : ಭಾರತಕ್ಕೆ ಒಂದಲ್ಲ ಒಂದು ರೀತಿ ಕಾಟ ಕೊಡುತ್ತಿರುವ ನೆರೆಯ ಕಮ್ಯುನಿಸ್ಟ್ ದೇಶ ಚೀನಾ, ಈಗ ಭಾರತದ ಗಡಿ ಸಮೀಪವೇ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ. ಹಿಮಾಲಯದ ತಪ್ಪಲಿನಲ್ಲಿ ಉಗಮವಾಗಿ ಟಿಬೆಟ್, ಭಾರತ, ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿದೊಡ್ಡ ಜಲವಿದ್ಯುತ್ ಉದ್ದೇಶದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ನಿರ್ಧರಿಸಿದೆ.
ಇದು ಸಹಜವಾಗಿಯೇ ನದಿಪಾತ್ರದ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಭಾರತದ ಗಡಿಗೆ ಸಮೀಪವಿರುವ ಟಿಬೆಟ್‌ನ ಯರ್ಲುಂಗ್ ಜಂಗ್ಬೋ (ಬ್ರಹ್ಮಪುತ್ರ) ನದಿ ಮೇಲೆ 11.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲು ಚೀನಾ ತಯಾರಿ ನಡೆಸಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಅಣೆಕಟ್ಟು ನಿರ್ಮಾಣ ಯೋಜನೆಯು ಬ್ರಹ್ಮಪುತ್ರ ಕೆಳ ಪ್ರದೇಶದಲ್ಲಿ ತಲೆ ಎತ್ತಲಿದೆ.
ಈ ಅಣೆಕಟ್ಟನ್ನು, ಬ್ರಹ್ಮಪುತ್ರ ನದಿಯು ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುವ ಮುನ್ನಾ ಬರುವ ಹಿಮಾಲಯದ ಕಣಿವೆಯಲ್ಲಿರುವ ತಿರುವಿನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ವಾರ್ಷಿಕವಾಗಿ 300 ಶತಕೋಟಿ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಚೀನಾ ಹಾಕಿಕೊಂಡಿದೆ. ಇದು ತ್ರಿಗೋರ್ಜಸ್ ಡ್ಯಾಂನಿಂದ ಹಾಲಿ ಉತ್ಪಾದಿಸುತ್ತಿರುವ 88.2 ಶತಕೋಟಿ ಕಿಲೋವ್ಯಾಟ್‌ಗಿಂತ 3 ಪಟ್ಟು ಹೆಚ್ಚು ಎಂಬುದು ವಿಶೇಷ. ಪ್ರಸ್ತುತ ವಿಶ್ವದ ಅತಿ ದೊಡ್ಡನೆಯ ಅಣೆಕಟ್ಟು ಎನಿಸಿರುವ ಚೀನಾದ ತ್ರಿಗೋರ್ಜಸ್ ಡ್ಯಾಮ್ ಸೇರಿದಂತೆ, ಭೂಮಿ ಮೇಲಿನ ಯಾವುದೇ ಮೂಲ ಸೌಕರ್ಯ ಯೋಜನೆಗಿಂತ ದೊಡ್ಡ ಪ್ರಮಾಣದ್ದಾಗಿದೆ.
ಭಾರತ ಕಳವಳ: ಭಾರತ ಹಾಗೂ ಬಾಂಗ್ಲಾದೇಶದ ಪಾಲಿಗೆ ಈ ಅಣೆಕಟ್ಟು ನಿರ್ಮಾಣ ಕಳವಳಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾರಣ, ಈ ಯೋಜನೆಯಿಂದಾಗಿ ಬ್ರಹ್ಮಪುತ್ರ ನದಿಯ ಬಹುಪಾಲು ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಧಿಸಲಿದ್ದು, ಉಭಯ ದೇಶಗಳ ನಡುವೆ ವಿಷಮ ಪರಿಸ್ಥಿತಿ ನಿರ್ಮಾಣವಾದಾಗ ದ್ವೇಷ ಸಾಧಿಸಲು ಭಾರತದಲ್ಲಿ ಪ್ರವಾಹ ಸೃಷ್ಟಿಸುವ ಆತಂಕವಿದೆ. ಈ ವರದಿ ಕುರಿತು ಭಾರತ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಬ್ರಹ್ಮಪುತ್ರ ಕುರಿತಾದ ಎಲ್ಲ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬ್ರಹ್ಮಪುತ್ರದಲ್ಲಿ ಮೇಲಿನ ಹರಿವಿನ ಸಂಗ್ರಹದಲ್ಲಿ ಯಾವುದೇ ಬದಲಾವಣೆ ಮಾಡದೆ, ನದಿ ಹರಿವಿನ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳುವುದಾಗಿ ಈ ಹಿಂದೆ ಭಾರತಕ್ಕೆ ಚೀನಾ ಮನವರಿಕೆ ಮಾಡಿತ್ತು.
ಭೂಕಂಪ ಅಪಾಯ ಸಾಧ್ಯತೆಗಳಿರುವ ಸೂಕ್ಷ್ಮ ಪ್ರದೇಶದಲ್ಲಿ ಚೀನಾ ನಿರ್ಮಿಸಲಿರುವ ಈ ಅಣೆಕಟ್ಟು ಪರಿಸರದ ಮೇಲೆ ಭಾರಿ ಪರಿಣಾಮ ಬೀರುವ ಆತಂಕ ತಜ್ಞರಿಂದ ವ್ಯಕ್ತವಾಗಿದೆ. ಅಲ್ಲದೇ ಈ ಯೋಜನೆಯಿಂದ ಭಾರತ ಹಾಗೂ ಬಾಂಗ್ಲಾದೇಶದಲ್ಲಿ ನೀರಿನ ಕೊರತೆ ಉಂಟಾಗುವ ಸಂಭವವಿದೆ. ಈ ಯೋಜನೆಯಿಂದ ಲಕ್ಷಾಂತರ ಜನರು ನಿರಾಶ್ರಿತರಾಗಲಿದ್ದು, ಅವರಿಗೆ ಪುನರ್ವಸತಿ ಸೌಕರ್ಯ ಕಲ್ಪಿಸುವ ಭರವಸೆಯನ್ನು ಚೀನಾ ಸರಕಾರ ನೀಡಿದೆ.
ಇದನ್ನೂ ಓದಿ : ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ