ಹುಬ್ಬಳ್ಳಿ : ರಾಜ್ಯ ಸರ್ಕಾರ ಉರುಳಿಸೋ ಉದ್ದೇಶ ಬಿಜೆಪಿಗಿಲ್ಲ. ಸರ್ಕಾರ ಬೀಳಿಸುವ, ಅಸ್ಥಿರಗೊಳಿಸುವ ಕೆಲಸ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಜನಾದೇಶ ಸಿಕ್ಕಿದೆ. ರಾಜ್ಯ ಸರ್ಕಾರ ಬೀಳಿಸುವ ಪ್ರಶ್ನೆಯೇ ಉದ್ಭವಿಸದು. ಕಾಂಗ್ರೆಸ್ ಸರ್ಕಾರ ಬೀಳಿಸಿ ಅಧಿಕಾರಕ್ಕೆ ಬರುವ ಉದ್ದೇಶ ನಮಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ 5 ವರ್ಷ ಸಂಪೂರ್ಣ ಆಡಳಿತ ನಡೆಸಲಿ. ಬಿಜೆಪಿಯ ನಿಲುವು, ಆಶಯ ಕೂಡಾ ಇದೇ ಆಗಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕಾರ ಮಾಡಿದ್ದರು. ಆದಾಗ್ಯೂ ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ಮಾಡಿದ್ದವು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸಿದ್ದರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಯತ್ನಿಸಿದರು. ಹೀಗಾಗಿ ಬಿಜೆಪಿ ಸರ್ಕಾರ ರಚಿಸಲು ಪ್ರಯತ್ನಿಸಿತ್ತು. ಆದರೆ ಈ ಬಾರಿ ಬಿಜೆಪಿ ಅಂಥ ಯಾವುದೇ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.
ಇನ್ನು ಸಿಎಂ ಮುಡಾ ಅಕ್ರಮದ ಆರೋಪ ಎದುರಿಸುತ್ತಿದ್ದಾರೆ. ಸಿಎಂ ಶುದ್ಧಹಸ್ತರು ಎಂದಾದರೆ ಅವರೇ ಸಿಎಂ ಆಗಿ ಮುಂದುವರಿಯಲಿ. ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ : ನಾನು ತಪ್ಪು ಮಾಡಿಲ್ಲ.. ರಾಜೀನಾಮೆ ಕೊಡಲ್ಲ- ಸಿಎಂ ಸಿದ್ದರಾಮಯ್ಯ ವಿಶ್ವಾಸದ ಮಾತು..!