ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿ ಸಿದ್ದರಾಮಯ್ಯನವರಿಗೆ ಪ್ರಶ್ನೆಗಳ ಮಳೆಯನ್ನೇ ಸುರಿಸಿ ಬಹಿರಂಗ ಚರ್ಚೆಗೆ ಕರೆದಿದ್ದರು. ಅಲ್ಲದೆ, ಪಲಾಯನವಾದಿ ಎಂದು ಸಿಎಂಗೆ ಟೀಕೆ ಮಾಡಿದ್ದರು.
ಈ ಬೆನ್ನಲ್ಲೇ ಇದೀಗ ಸಾಲು-ಸಾಲು ಟ್ವೀಟ್ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಚಾರ್ಜ್ಶೀಟ್ ಬಿಟ್ಟ ವಿಜಯೇಂದ್ರಗೆ ಸಿದ್ದು ಸರಣಿ ಗುದ್ದು ಕೊಟ್ಟಿದ್ದು, ವಕ್ಫ್ ಆಸ್ತಿ ವಿಚಾರದಲ್ಲಿ ಇಬ್ಬಗೆ ನೀತಿ ಬೇಡ, ನಿಮ್ಮದೇ ಸಿಎಂಗಳ ಅವಧಿಯಲ್ಲಿ ನೂರಾರು ಖಾತೆ ಆಗಿವೆ. ರೈತರ ಆಸ್ತಿಗಳನ್ನು ವಕ್ಪ್ ಬೋರ್ಡ್ಗೆ ಖಾತೆ ಬದಲಿಸಲಾಗಿದೆ. ಶೀಘ್ರದಲ್ಲೇ ನಾವು ದಾಖಲೆ ಬಿಡುಗಡೆ ಮಾಡುತ್ತೇವೆ. ಆಗ ನಿಮ್ಮ ಪಾಪದ ಫಲ ನೀವೇ ಉಣ್ಣಬೇಕಾಗುತ್ತೆ ಎಂದು ತಿರುಗೇಟು ನೀಡಿದ್ದಾರೆ.
ನನ್ನ ವಿರುದ್ದ ಭ್ರಷ್ಟಾಚಾರ ಆರೋಪ ಮಾಡುವ ನೈತಿಕತೆ ನಿಮಗಿಲ್ಲ. ನೀವು ಸಾಲು ಸಾಲು ಹಗರಣಗಳ ಕಿಂಗ್ ಪಿನ್. ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿದ್ದು ಯಾರು? ನೀವು ಹೊಸಬರು, ತೆರಿಗೆ, ಅನುದಾನ, ಜಿಎಸ್‌ಟಿ ನಿಮಗೆ ಗೊತ್ತಿಲ್ಲ. ತೆರಿಗೆ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್-ತಾಖತ್ ನಿಮಗಿಲ್ಲ. ವಿಜಯೇಂದ್ರ ನೀವು ಕಮಿಷನ್ ಹೊಡೆಯುವುದರಲ್ಲಿ ಪರಿಣತರು. ಮೊದಲು ಯತ್ನಾಳ್, ಜಾರಕಿಹೊಳಿ, ವಿಶ್ವನಾಥ್ ಆರೋಪಕ್ಕೆ ಉತ್ತರ ಕೊಡಿ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ನಮ್ಮ ಬಗ್ಗೆ ಚಿಂತಿಸುವ ಬದಲು ನಿಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳಿ. ನನ್ನ ಜೊತೆ ಚರ್ಚೆಗೆ ಮೊದಲು ಯತ್ನಾಳ್, ಜಾರಕಿಹೊಳಿ ಜೊತೆ ಚರ್ಚಿಸಿ. ನಿಮ್ಮ ತಂದೆಯನ್ನು ಸಿಎಂ ಮಾಡಲು 2000 ಕೋಟಿ ಕೊಟ್ಟಿದ್ದೀರಂತೆ.. ನಿಮ್ಮನ್ನು ಅಧ್ಯಕ್ಷರನ್ನಾಗಿಸಲು ಕೋಟಿ-ಕೋಟಿ ಕೊಟ್ಟಿದ್ದೀರಂತೆ ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ ಅದಕ್ಕೆ ಉತ್ತರ ಕೊಡಿ ಎಂದು ಟ್ವೀಟ್ನಲ್ಲೇ ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾಲೆಳೆದಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಸೀಸನ್ 11ರ ಮೊದಲ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಹನುಮಂತ..!