ಬೆಂಗಳೂರು : ಲೋಕಸಭೆ ಚುನಾವಣೆ ಬಳಿಕ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ನಡೆಯುವ ಮಾತಿನ ಸಮರಕ್ಕೆ ಇಂದಿನಿಂದ ವಿಧಾನಮಂಡಲ ಅಧಿವೇಶನ ವೇದಿಕೆಯಾಗಲಿದೆ.
ವಿಧಾನ ಮಂಡಲದ ಉಭಯ ಸದನಗಳ ಕಲಾಪ ಇಂದಿನಿಂದ ಆರಂಭವಾಗಲಿದ್ದು, ಮುಂದಿನ 10 ದಿನ ನಡೆಯಲಿದೆ. ಈ ಬಾರಿ ಮೊದಲ ದಿನವೇ ಅಧಿವೇಶನದಲ್ಲಿ ಕೋಲಾಹಲವೇ ಸೃಷ್ಟಿಯಾಗುವ ಸಾಧ್ಯತೆಯಿದೆ.
ಆಡಳಿತ ಪಕ್ಷದ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವೂ ಮುಡಾ ಸೈಟ್ ಹಗರಣ, ವಾಲ್ಮೀಕಿ ನಿಗಮದ ಕೋಟಿ-ಕೋಟಿ ಅಕ್ರಮದ ಹಂಗಾಮ, ಜೊತೆಗೆ ಅಭಿವೃದ್ಧಿಯಲ್ಲಿನ ಹಿನ್ನಡೆ, ಕಲುಷಿತ ನೀರಿನ ಪ್ರಕರಣಗಳು, ಹಾಲಿನ ದರ ಏರಿಕೆ, ಬರ ನಿರ್ವಹಣೆಯಲ್ಲಿನ ಲೋಪಗಳು ಮತ್ತು ಮಳೆಗಾಲದಲ್ಲಿ ಮುಂಗಾರು ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳ ಕೊರತೆ ಸೇರಿದಂತೆ ಹಲವಾರು ವಿಚಾರಗಳನ್ನು ಪ್ರಸ್ತಾವಿಸಿ ಸರ್ಕಾರದ ವಿರುದ್ಧ ಮುಗಿ ಬೀಳಲು ತಯಾರಿ ನಡೆಸಿವೆ.
ಅಂತೆಯೇ BJP-JDS ಜಂಟಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಕೊಡಲು ರಣತಂತ್ರ ರೂಪಿಸಿದೆ. ಹಳೆಯ ಹಗರಣ ಕೆದಕಿ ವಿಪಕ್ಷಗಳಿಗೆ ತಿರುಗೇಟು ಕೊಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇನ್ನೊಂದೆಡೆ ಸದನದ ಒಳಗೆ-ಹೊರಗೆ ಹೋರಾಟಕ್ಕೆ ಮೈತ್ರಿ ನಾಯಕರು ನಿರ್ಧಾರ ಮಾಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆಯು ಇದೆ.
ಇದನ್ನೂ ಓದಿ : 4-1 ಅಂತರದಿಂದ ಜಿಂಬಾಬ್ವೆಯನ್ನು ಮಣಿಸಿ ಟಿ20 ಸರಣಿ ಗೆದ್ದ ಭಾರತ..!