ತಿರುಪತಿ : ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿದಿನ ಲಕ್ಷಾಂತರ ಜನರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಬೇರೆ ಬೇರ ದೇಶಗಳಿಂದ, ರಾಜ್ಯಗಳಿಂದ ಭಕ್ತರ ದಂಡೇ ಇಲ್ಲಿಗೆ ಹರಿದು ಬರುತ್ತದೆ. ಲಕ್ಷಾಂತರ ಭಕ್ತರ ಆಗಮನದಿಂದ ತಿರುಮಲ ಕ್ಷೇತ್ರ ಸದಾ ಸಡಗರದಿಂದ ಕೂಡಿರುತ್ತದೆ. ಇನ್ನು ಇದೇ ಜನವರಿ 10ರಂದು ಅಂದರೆ ನಾಳೆ ವೈಕುಂಠ ಏಕಾದಶಿ ಪ್ರಯುಕ್ತ ತಿಮ್ಮಪ್ಪನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದ್ದು, ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯುವ ವೇಳೆ ಹೆಚ್ಚಾದ ಭಕ್ತಸಾಗರದಿಂದ ಕಾಲ್ತುಳಿತ ಉಂಟಾಗಿ 7 ಭಕ್ತರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹೌದು.. ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಿಂದ ಏಳು ಮಂದಿ ಭಕ್ತರು ಸಾವನಪ್ಪಿದ್ದಾರೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಭಕ್ತಾದಿಗಳು ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ಭಾರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸೃಷ್ಟಿಯಾಗಿದೆ. ಟಿಕೆಟ್ ಪಡೆದುಕೊಳ್ಳಲು ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ನಾಳೆ ವೈಕುಂಠ ಏಕಾದಶಿ ನಡೆಯಲಿದೆ. ಈ ವೇಳೆ ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಿದ್ದು, ತಿಮ್ಮಪ್ಪನ ಆಲಯದಲ್ಲಿ ಸಡಗರ ಮನೆ ಮಾಡಿರುತ್ತೆ. ಆದ್ರೆ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ದಾರುಣ ಘಟನೆ ನಡೆದುಹೋಗಿದ್ದು, ಭಾರೀ ಬೇಸರದ ಸಂಗತಿ.
ಕಾಲ್ತುಳಿತ ಘಟನೆಯ ಬಗ್ಗೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಜ.10ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ದೇಶ-ವಿದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ದರ್ಶನಕ್ಕೆ ಬಂದ ಭಕ್ತರು ಪ್ರಾಣ ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ. ಜೊತೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಗೊತ್ತಿದ್ದರೂ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಬೀದರ್ ಬಂದ್ – ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!