ಚಿಕ್ಕಬಳ್ಳಾಪುರ : ಸಿಎನ್ಜಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಲಾರಿ ಹಾಗೂ ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಮತ್ತೊಂದು ಲಾರಿ ನಡುವೆ ಭೀಕರ ಡಿಕ್ಕಿ ಸಂಭವಿಸಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಹುನೇಗಲ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ.
ಹುನೇಗಲ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಎರಡು ಲಾರಿಗಳು ವೇಗವಾಗಿ ಚಲಿಸುತ್ತಿದ್ದ ವೇಳೆ ಭಯಾನಕವಾಗಿ ಡಿಕ್ಕಿ ಸಂಭವಿಸಿದೆ. ಇದರಿಂದ ಒಂದು ಲಾರಿಯಲ್ಲಿದ್ದ ಸಿಎನ್ಜಿಯಿಂದ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡು ಭಯವನ್ನು ಹುಟ್ಟಿಸಿದೆ. ಗ್ರಾಮಸ್ಥರೆಲ್ಲರು ತಮ್ಮ ತಮ್ಮ ಮನೆಯಿಂದ ಬರಲು ಭಯಪಟ್ಟು ಒಳಗೆ ಕುಳಿತ್ತಿದ್ದಾರೆ. ಲಾರಿಗಳಿಗೆ ಬೆಂಕಿ ಹೊತ್ತಿದ್ದರಿಂದ ಗ್ರಾಮದಲ್ಲೆಲ್ಲಾ ಒಂದು ರೀತಿ ಭೀತಿ ಉಂಟಾಗಿದೆ.
ಇನ್ನು ಈ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ನಡು ರಸ್ತೆಯಲ್ಲೇ ಈ ಘಟನೆ ನಡೆದಿದ್ದರಿಂದ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಉಂಟಾಗಿದ್ದು, ಪ್ರಯಾಣಿಕರು, ಚಾಲಕರು ತೊಂದರೆ ಅನುಭವಿಸಿದ್ದಾರೆ. ಇನ್ನು ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಇಂದು ನಿಗಮಬೋಧ ಘಾಟ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ..!