ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿದ್ದು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆ ನಡೆಸಿದ್ದಾರೆ.
ಪಾದಯಾತ್ರೆ ಉದ್ದಕ್ಕೂ ಬಿಜೆಪಿ-ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುತ್ತಾ ಬಂದಿದ್ದಾರೆ. ಈಗಾಗಲೇ ಪಾದಯಾತ್ರೆ ಮೈಸೂರು ತಲುಪಿದೆ. ಇಂದು ಮೈಸೂರಿನ ಮಹಾರಾಜ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯ ವಿರುದ್ದ ಗುಡುಗಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಪರಿಶಿಷ್ಟರಿಗೆ ನ್ಯಾಯ ಸಿಗ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳಿಗೆ ಸೂಸೈಡ್ ಭಾಗ್ಯ ಸಿಗ್ತಾ ಇದೆ. ಪೋಸ್ಟಿಂಗ್ ಪಡೆಯಲೂ ಈ ಸರ್ಕಾರದಲ್ಲಿ ಹಣ ಕೊಡ್ಬೇಕು. ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡದೇ ಈ ಹೋರಾಟ ನಿಲ್ಲಲ್ಲ ಎಂದಿದ್ದಾರೆ.
ಇನ್ನು ನಿಷ್ಠಾವಂತ ಅಧಿಕಾರಿ ಸಾವಿನಿಂದ ವಾಲ್ಮೀಕಿ ಹಗರಣ ಹೊರಬಂತು. SC-ST ಹಣವನ್ನು ಸಿದ್ದರಾಮಯ್ಯ ಗ್ಯಾರಂಟಿಗೆ ಬಳಸಿಕೊಳ್ತಿದ್ದಾರೆ. ಒಂದು ರೂಪಾಯಿ ಕೊಟ್ಟು ಪಡೆದಿದ್ದ ಭೂಮಿಗೆ 62 ಕೋಟಿ ಕೇಳ್ತಿದ್ದಾರೆ. ಪರಿಶಿಷ್ಟರ ಜಮೀನು ಲೂಟಿ ಮಾಡಿ ಹಣ ಕೇಳ್ತಿದ್ದಿರಿ ನಿಮಗೆ ನಾಚಿಕೆ ಆಗಲ್ವಾ ಎಂದು ಮೈಸೂರು ಮಹಾರಾಜ ಕಾಲೇಜು ಗ್ರೌಂಡ್ನಲ್ಲಿ ಆರ್.ಅಶೋಕ್ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಭೂಕುಸಿತ ಪೀಡಿತ ವಯನಾಡಿನಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ..!