ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರ ಬಹುತೇಕ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ. ನೌಕರರು ಕರೆ ನೀಡಿದ್ದ ಮುಷ್ಕರದ ನಿರ್ಧಾರವನ್ನು ವಾಪಸ್ ಪಡೆಯುವ ಬಗ್ಗೆ ಮಹತ್ವದ ಚರ್ಚೆ ಆಗುತ್ತಿದೆ. ನೌಕರರಿಗೆ ಪರಿಷ್ಕೃತ ವೇತನ ಜಾರಿ, ವೇತನ ಹಿಂಬಾಕಿ, ನಿಗಮಗಳಿಗೆ ಶಕ್ತಿ ಯೋಜನೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಡಿಸೆಂಬರ್ 31ರಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು.
ಸಾರಿಗೆ ನೌಕರರ ಮುಷ್ಕರ ಸಂಬಂಧ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಮೀಟಿಂಗ್ ನಡೆಯುತ್ತಿದೆ. ಅನಂತ ಸುಬ್ಬರಾವ್ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಹಾಗೂ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ನೌಕರರ ಮುಷ್ಕರ ನಿರ್ಧಾರವನ್ನು ವಾಪಸ್ ಪಡೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ.
ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್ ನೀಡಿ ಮುಷ್ಕರವನ್ನು ಹಿಂಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನಾಳೆ ನಡೆಯಲಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಅಧಿಕೃತವಾಗಿ ಮುಷ್ಕರ ವಾಪಸ್ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಮುಷ್ಕರ ವಾಪಸ್ ಬಗ್ಗೆ ಬಿಟಿವಿಗೆ ಬಲ್ಲ ಮೂಲಗಳು ಖಚಿತ ಮಾಹಿತಿ ನೀಡಿದ್ದು ರಾಜ್ಯ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರ ನಡೆಯುವುದೇ ಅನುಮಾನ ಆಗಿದೆ. ನಾಳೆ ನೌಕರರ ಮುಷ್ಕರ ವಾಪಸ್ ನಿರ್ಧಾರ ಪ್ರಕಟವಾದರೆ ರಾಜ್ಯಾದ್ಯಂತ ಪ್ರಯಾಣಿಕರು ನಿಟ್ಟುಸಿರು ಬಿಡಲಿದ್ದಾರೆ.
ಇದನ್ನೂ ಓದಿ : ಮೃತ ಗುತ್ತಿಗೆದಾರ ಸಚಿನ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ – ಸಚಿವ ಈಶ್ವರ್ ಖಂಡ್ರೆ ಘೋಷಣೆ