ಬೆಂಗಳೂರು : ರಾಜ್ಯ ಸರ್ಕಾರ ಶೃಂಗೇರಿಯ ಶಾರದ ಮಠದ ಅಧೀನದಲ್ಲಿ ನಡೆಯುತ್ತಿರೋ ಜ್ಞಾನೋದಯ ಕಾಲೇಜಿನ ಕಟ್ಟಡಕ್ಕೆ ಡೆಮಾಲಿಷನ್ ಆದೇಶ ನೀಡಿತ್ತು. ಈ ವಿಚಾರ ಹೊರ ಬರುತ್ತಿದ್ದಂತೆ ಸರ್ಕಾರದ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ BBMP, ಇದೀಗ ಶೃಂಗೇರಿ ಮಠದ ಜ್ಞಾನೋದಯ ಕಾಲೇಜು ಡೆಮಾಲಿಷನ್ಗೆ ತಡೆ ನೀಡಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಹೊರಡಿಸಿದ್ದಾರೆ.
ಶೃಂಗೇರಿ ಮಠಕ್ಕೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿರುವ ಕಾಲೇಜು ಕಟ್ಟಡದಲ್ಲಿ ಒಂದಿಷ್ಟು ಭಾಗವು ಅನಧಿಕೃತವಾಗಿದ್ದು, ಇವುಗಳನ್ನು ನವೆಂಬರ್ 11ರಂದು ಕೆಡವುದಾಗಿ ಪಾಲಿಕೆ ನೋಟಿಸ್ ಜಾರಿ ಮಾಡಿತ್ತು. ಇನ್ನು ಕಾಲೇಜು ಡೆಮಾಲಿಷನ್ ಸಂಬಂಧ ಪೊಲೀಸ್ ಠಾಣೆಗೆ ರಕ್ಷಣೆ ಕೋರಿದ್ದ ಪತ್ರದ ಸಂಬಂಧ ಪಾಲಿಕೆ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಅನಧಿಕೃತ ಭಾಗವಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನಿಯಮದಂತೆ ಸ್ಥಳಪರಿಶೀಲನೆ ಮಾಡದೆ ಏಕಾಏಕಿ ಪೊಲೀಸ್ ಠಾಣೆಗೂ ಪತ್ರ ಬರೆದಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಈ ಎಲ್ಲವನ್ನು ಪರಿಗಣಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶಿಸಿದ್ದಾರೆ.
ಶೃಂಗೇರಿಯ ಶಾರದ ಮಠದ ಜ್ಞಾನೋದಯ ಕಾಲೇಜಿನ ಕಟ್ಟಡಕ್ಕೆ ಡೆಮಾಲಿಷನ್ ಆದೇಶ ಕೊಟ್ಟಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಅಸಮಾಧಾನ ವ್ಯಕ್ತವಾಗಿತ್ತು. ಚಾಮರಾಜಪೇಟೆಯ ಸುತ್ತಮುತ್ತ ನೂರಾರು ಅನಧಿಕೃತ ಕಟ್ಟಡ ಇದೆ. ಆದ್ರೆ ಅದನ್ನೆಲ್ಲ ಕೈಹಾಕುವ ಧೈರ್ಯ ಮಾಡದ ಸರ್ಕಾರ ಹಾಗೂ ಪಾಲಿಕೆ, ಮಠದ ಅಧೀನದಲ್ಲಿರೋ ಶಿಕ್ಷಣ ಕೇಂದ್ರದ ಮೇಲೆ ಕಣ್ಣಿಟ್ಟಿರುವುದು ಯಾಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಸಲ್ಮಾನ್ ಖಾನ್ ರಕ್ಷಣೆಗೆ 70 ಜನರ ನೇಮಕ.. 4 ಲೇಯರ್ ಭದ್ರತೆ, ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?