ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಆರೋಪಿಯ ಚಟುವಟಿಕೆ, ಚಲನವಲನದ ಜಾಡು ಹಿಡಿದು ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿ ಪತ್ತೆಗೆ ಮುಂಬೈ ಪೊಲೀಸರು 20 ವಿಶೇಷ ತಂಡವನ್ನು ರಚಿಸಿದ್ದು, ಭೂಗತ ಲೋಕವನ್ನೇ ಬೆಚ್ಚಿ ಬೀಳಿಸಿದ್ದ ಹಾಗೂ ದುಷ್ಕರ್ಮಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ‘ ಕರ್ನಾಟಕ ಮೂಲದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ತನಿಖೆ ಚುರುಕುಗೊಳಿಸಿರೋ ದಯಾ ನಾಯಕ್ ಟೀಂಗೆ ಅಚ್ಚರಿಯ ಸಂಗತಿಗಳು ಸಿಗ್ತಿವೆ ಎಂದು ತಿಳಿದುಬಂದಿದೆ.
ಸದ್ಯ ಇಡೀ ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಊಹಾಪೋಹಗಳೇ ಹರಿದಾಡುತ್ತಿದ್ದು, ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿರುವಾಕೆ ಪೊಲೀಸರ ಬಳಿ ಹೇಳಿದಂತೆ ಆ ಕಳ್ಳ ಒಂದು ಕೋಟಿ ರೂಪಾಯಿಗೆ ಡಿಮಾಂಡ್ ಮಾಡಿದ್ದನಂತೆ. ಅಷ್ಟಕ್ಕೂ ಘಟನೆಯ ಬಳಿಕ ಈ ಆರೋಪಿ, ಸುಮಾರು ಒಂದು ಗಂಟೆ ಮನೆಯೊಳಗೆ ಅವಿತು ಕುಳಿತಿರುವ ಶಂಕೆಯೂ ವ್ಯಕ್ತವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸೈಫ್ ಅಲಿ ಖಾನ್ ಅಪಾರ್ಟ್ಮೆಂಟ್ ಒಳಗೆ ಆಗಂತುಕ ಓಡಾಡಿದ ಸಿಸಿಟಿವಿ ದೃಶ್ಯಗಳು ಸಾಕ್ಷಿಯಾಗಿವೆ ಎಂದು ಹೇಳಲಾಗ್ತಿದೆ.
ಘಟನೆ ನಡೆದ ರಾತ್ರಿ ಕರೀನಾ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ. ಕರೀನಾ ತಮ್ಮ ತಂಗಿ ಕರೀಷ್ಮಾ ಕಪೂರ್ ಹಾಗೂ ರಿಯಾ, ಸೋನಂ ಜೊತೆ ಪಾರ್ಟಿಯೊಂದಕ್ಕೆ ತೆರಳಿದ್ದರಂತೆ. ಮಧ್ಯರಾತ್ರಿ ಪಾರ್ಟಿಯಲ್ಲಿ ಎಂಜಾಯ್ ಮಾಡ್ತಿದ್ದ ಬಗ್ಗೆ ಸ್ಟೇಟಸ್ ಕೂಡ ಹಾಕಿದ್ದರು ಎನ್ನಲಾಗಿದೆ.
ಇನ್ನು ಗಂಭೀರ ಗಾಯಗಳಿಂದ ಬಳಲುತ್ತಿರುವ ಸೈಫ್ ಅಲಿ ಖಾನ್ಗೆ ನಿನ್ನೆ ಕೆಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯಿಂದ ಇಡೀ ಮುಂಬೈ ಬೆಚ್ಚಿಬಿದ್ದಿದ್ದು, ಬಾಲಿವುಡ್ ಚಿತ್ರರಂಗ, ಗಣ್ಯರು, ರಾಜಕಾರಣಿಗಳು ಆತಂಕ ಹೊರ ಹಾಕಿದ್ದಾರೆ. ಸದ್ಯ ಪೊಲೀಸ್ ಅಧಿಕಾರಿಗಳು ಸೈಫ್ ಮನೆಯಲ್ಲೇ ಬೀಡು ಬಿಟ್ಟಿದ್ದು, ಹಲವು ಆ್ಯಂಗಲ್ಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಛತ್ತೀಸ್‌ಗಡದಲ್ಲಿ ಮತ್ತೊಂದು ಭೀಕರ ಎನ್‌ಕೌಂಟರ್ – ಭದ್ರತಾ ಪಡೆ ಕಾರ್ಯಾಚರಣೆಗೆ 12 ನಕ್ಸಲರು ಬಲಿ..!