ಬೆಂಗಳೂರು: ರಾಜ್ಯದ ಧೀಮಂತ ನಾಯಕರು, ಮುತ್ಸುದ್ಧಿ ರಾಜಕಾರಣಿ, ಮಂಡ್ಯ ಜಿಲ್ಲೆಯ ಸುಪುತ್ರರಾದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರಿಗೆ ಜಿಲ್ಲೆಯ ಮತ್ತು ರಾಜ್ಯದ ಜನತೆ ಪರವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲು ದಿವ್ಯಚೇತನ ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆ ಮುಂದಾಗಿದೆ. ವೇದಿಕೆಯ ಸಂಚಾಲಕರಾಗಿ ಶಾಸಕ ದಿನೇಶ್ ಗೂಳಿಗೌಡ ಅವರನ್ನು ನಿಯೋಜನೆ ಮಾಡಲಾಗಿದೆ.
ಸರ್ಕಾರಿ ನಿವಾಸ-7 ಮಿನಿಸ್ಟರ್ ಕ್ವಾಟರ್ಸ್ನಲ್ಲಿ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು, ಎಸ್.ಎಂ.ಕೃಷ್ಣ ಅವರ ಅಭಿಮಾನಿಗಳ ಜೊತೆಗೆ ಎಸ್.ಎಂ.ಕೃಷ್ಣ ಅವರ ಶ್ರದ್ಧಾಂಜಲಿ ಪೂರ್ವಭಾವಿ ಸಭೆ ನಡೆಯಿತು. ಎಸ್.ಎಂ.ಕೃಷ್ಣ ಅವರಿಗೆ ಭಾವ ನಮನ, ಗೀತ ನಮನ, ಚಿತ್ರ ನಮನ, ಪುಷ್ಪ ನಮನ ಹಾಗೂ ದೀಪ ನಮನ ಒಳಗೊಂಡಂತೆ ಐದು ರೂಪದಲ್ಲಿ ನಮನ ಸಲ್ಲಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಮಹತ್ವದ ಸಭೆಯಲ್ಲಿ ಮಂಡ್ಯ ಶಾಸಕ ರವಿಕುಮಾರ್ ಗೌಡ, ವಿಧಾನಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಶಿವರಾಮೇಗೌಡ, ಕೆ.ಬಿ.ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಹಿರಿಯ ಐಪಿಎಸ್ ಅಧಿಕಾರಿ ರವಿಕಾಂತೇಗೌಡ, ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಯಪ್ರಕಾಶ್ ಗೌಡ, ಸತ್ಯಾನಂದ, ರಾಮು, ಅಮರನಾಥಗೌಡ, ಎನ್.ಎಸ್.ರಮೇಶ್ ಸೇರಿದಂತೆ ಮಂಡ್ಯ ಜಿಲ್ಲೆಯ ಹಲವು ನಾಯಕರು, ಮುಖಂಡರು ಉಪಸ್ಥಿತರಿದ್ದರು.
‘ಡಿಸಿಎಂ ಡಿಕೆಶಿ ಜೊತೆ ಚರ್ಚಿಸಿ ದಿನಾಂಕ ನಿಗದಿ’ – ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ
ಎಸ್.ಎಂ.ಕೃಷ್ಣಗೆ ಪಂಚನಮನ ಸಲ್ಲಿಸುವ ಪೂರ್ವಭಾವಿ ಸಭೆ ಬಳಿಕ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಮಾಹಿತಿ ನೀಡಿದರು. ಹಿರಿಯ ರಾಜಕಾರಣಿ, ಧೀಮಂತ ನಾಯಕರು, ಅಭಿವೃದ್ಧಿಯ ಹರಿಕಾರರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸುವ ಕುರಿತು ಮಂಡ್ಯ ಜಿಲ್ಲೆಯ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ದಿವ್ಯಚೇತನ ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯ ಈ ಕಾರ್ಯಕ್ರಮಕ್ಕೆ ಸಂಚಾಲಕರನ್ನಾಗಿ ಶಾಸಕರಾದ ದಿನೇಶ್ ಗೂಳಿಗೌಡ ಅವರನ್ನು ನಿಯೋಜಿಸಲಾಗಿದೆ ಎಂದರು.
ಎಸ್.ಎಂ.ಕೃಷ್ಣ ಅವರ ‘ಪಂಚ’ನಮನ ಕಾರ್ಯಕ್ರಮ ಹಮ್ಮಿಕೊಳ್ಳುವ ದಿನಾಂಕ, ಸಿದ್ಧತೆ ಮತ್ತು ರೂಪುರೇಷೆಗಳನ್ನು ವಿದೇಶ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ವಾಪಸ್ ಆದ ನಂತರ ಅವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.
ಇದನ್ನೂ ಓದಿ : BTV ಬಿಗ್ ಇಂಪ್ಯಾಕ್ಟ್ – ಖುಲ್ಲಾಂಖುಲ್ಲ ರಾಸಲೀಲೆ ನಡೆಸಿದ್ದ DySP ರಾಮಚಂದ್ರಪ್ಪ ಸಸ್ಪೆಂಡ್!