ಬೆಂಗಳೂರು : ರಾಜ್ಯ ರಾಜಕಾರಣದಲ್ಲೇ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದ್ದ ಬಿಜೆಪಿ ಶಾಸಕ ಮುನಿರತ್ನ ವಿರುದ್ದದ ಅತ್ಯಾಚಾರ ಕೇಸ್ ತನಿಖೆ ಮತ್ತೆ ಚುರುಕುಗೊಂಡಿದ್ದು, ಜಾಮೀನು ಪಡೆದು ಶಾಸಕ ಮುನಿರತ್ನ ಹೊರ ಬಂದ ಬೆನ್ನಲ್ಲೇ ಇದೀಗ ಹನಿಟ್ರ್ಯಾಪ್ ಪ್ರಕರಣದಲ್ಲಿ ಮುನಿರತ್ನಗೆ ಸಾಥ್ ನೀಡುತ್ತಿದ್ದ ಆರೋಪದ ಮೇಲೆ ಹೆಬ್ಬಗೋಡಿಯ ಕ್ರಿಮಿನಲ್ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿಯನ್ನ SIT ಬಂಧಿಸಿದೆ.
ಕೋರ್ಟ್ ನಾಲ್ಕು ದಿನಗಳ ಕಾಲ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿಯವರನ್ನು SIT ವಶಕ್ಕೆ ನೀಡಿದ್ದು, ಸದ್ಯ SIT ಅಯ್ಯಣ್ಣ ರೆಡ್ಡಿ ವಿಚಾರಣೆಯನ್ನ ಚುರುಕುಗೊಳಿಸಿದೆ. ವಿಚಾರಣೆ ವೇಳೆ ಹಲವು ಅಂಶಗಳು ಬಯಲಾಗಿದ್ದು, ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿಯವರೇ ರಾಜಕಾರಣಿಗಳಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಮಾಸ್ಟರ್ ಪ್ಲಾನ್ ಕೊಟ್ಟಿದ್ದರು ಎಂಬ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ.
ಶಾಸಕ ಮುನಿರತ್ನ ಪ್ರತಿನಿಧಿಸುತ್ತಿದ್ದ RRನಗರದಲ್ಲಿ ಅಯ್ಯಣ್ಣ ರೆಡ್ಡಿ ಹೆಚ್ಚು ಕೆಲಸ ಮಾಡಿದ್ದರು. ಮುನಿರತ್ನ ಹನಿಟ್ರ್ಯಾಪ್ ದಂಧೆಗೆ ಅಯ್ಯಣ್ಣ ರೆಡ್ಡಿ ಸಾಥ್ ನೀಡುತ್ತಿದ್ದರು. ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ಕೂಡ ರೂಪಿಸಲಾಗಿತ್ತು. ಸಂಚು ರೂಪಿಸಿದ್ದು ಗೊತ್ತಿದ್ದರೂ ಮಾಹಿತಿ ಬಚ್ಚಿಟ್ಟಿದ್ದರೆಂಬ ಆರೋಪ ಕೂಡ ಕೇಳಿ ಬಂದಿದ್ದು, ಸಂತ್ರಸ್ಥೆ ಹಾಗೂ ಮಾಜಿ ಕಾರ್ಪೊರೇಟರ್ ವೇಲುನಾಯ್ಕರ್ ವಿಚಾರಣೆ ವೇಳೆ ಈ ಎಲ್ಲಾ ಮಾಹಿತಿಯನ್ನು SIT ಮುಂದೆ ಬಹಿರಂಗಪಡಿಸಿದ್ದಾರೆ.
ಸದ್ಯ ರಾಜಕಾರಣಿಗಳ ಟ್ರ್ಯಾಪ್ ಮಾಡಲು ಸಹಕರಿಸ್ತಿದ್ದ ಒಳಸಂಚಿನಲ್ಲಿ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ಮಾಡಲಾಗ್ತಿದೆ. SIT ಪೂರ್ಣ ತನಿಖೆ ಬಳಿಕವಷ್ಟೇ ಇನ್ಸ್ಪೆಕ್ಟರ್ ಅಯ್ಯಣ್ಣ ಪಾತ್ರದ ಬಗ್ಗೆ ಹೆಚ್ಚಿನ ಸತ್ಯಾಸತ್ಯತೆ ಗೊತ್ತಾಗಲಿದೆ.
ಇದನ್ನೂ ಓದಿ : ಕೋವಿಡ್ ಹಗರಣದ ತನಿಖೆಗೆ SIT ರಚನೆ – ಅರೆಸ್ಟ್ ಆಗ್ತಾರಾ ಹಾರ್ಟ್ ಡಾಕ್ಟರ್ ಸಿಎನ್ ಮಂಜುನಾಥ್?