ಖ್ಯಾತ ಗಾಯಕ, ನಟ ದಿಲ್ಜಿತ್ ದೋಸಾಂಜ್ ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಇದೆ. ಹಲವು ದೇಶಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಗಮನಾರ್ಹ ಸಿನಿಮಾಗಳಲ್ಲಿ ನಟಿಸುವ ಮೂಲಕವೂ ಹೆಸರು ಮಾಡಿದ್ದಾರೆ. ಇದೀಗ ದಿಲ್ಜಿತ್ ದೋಸಾಂಜ್ ಅವರಿಗೆ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ.
ಅಲ್ಲದೆ, ಕೆಲವು ಸಮಯ ಅವರು ಪ್ರಧಾನಿ ಜೊತೆ ಮಹತ್ವದ ಸಂವಾದ ಕೂಡ ಮಾಡಿದ್ದಾರೆ. ಈ ಅಪರೂಪದ ಕ್ಷಣಗಳ ವಿಡಿಯೋವನ್ನು ದಿಲ್ಜಿತ್ ದೋಸಾಂಜ್ ಹಾಗೂ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಇದು ತುಂಬ ಸ್ಮರಣೀಯ ಮಾತುಕಥೆ. ಈ ಭೇಟಿಯ ಹೈಲೈಟ್ಸ್ ಇಲ್ಲಿದೆ’ ಎಂಬ ಕ್ಯಾಪ್ಷನ್ನೊಂದಿಗೆ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಭಾರತದ ಓರ್ವ ಹಳ್ಳಿ ಹುಡುಗ ಪ್ರಪಂಚದಲ್ಲಿ ಹೆಸರು ಮಾಡುತ್ತಾನೆ ಎಂದಾಗ ತುಂಬ ಖುಷಿ ಆಗುತ್ತದೆ’ ಎಂದು ಪ್ರಧಾನಿ ಮೋದಿ ಅವರು ದಿಲ್ಜಿತ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.
‘ನಿಮ್ಮ ಕುಟುಂಬದವರು ನಿಮಗೆ ದಿಲ್ಜಿತ್ (ಹೃದಯ ಗೆದ್ದವ) ಎಂದು ಹೆಸರು ಇಟ್ಟರು. ನೀವು ಜನರ ಹೃದಯವನ್ನು ಗೆಲ್ಲುತ್ತಲೇ ಸಾಗುತ್ತಿದ್ದೀರಿ’ ಎಂದು ಕೂಡ ಗಾಯಕನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಅವರ ಮಾತಿಗೆ ದಿಲ್ಜಿತ್ ಅವರು ಧನ್ಯವಾದ ಅರ್ಪಿಸಿದ್ದಾರೆ.
ಈ ಭೇಟಿಯ ವೇಳೆ ಗುರುನಾನಕ್ ಗೀತೆಯನ್ನು ದಿಲ್ಜಿತ್ ಹಾಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದಕ್ಕೆ ದಿಲ್ಜಿತ್ ದೋಸಾಂಜ್ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಮತ್ತೊಂದು ಬೇಬಿಬಂಪ್ ಲುಕ್ನಲ್ಲಿ ಹರಿಪ್ರಿಯಾ – ಸ್ಪೆಷಲ್ ಫೋಟೋಶೂಟ್ ಹಂಚಿಕೊಂಡ ಕ್ಯೂಟ್ ಕಪಲ್..!