ಬೆಂಗಳೂರು : ಎಲ್ಲಾ ಪಕ್ಷದ ಶಾಸಕರಿಗೂ ತಲಾ 10 ಕೋಟಿ ರೂ. ಅನುದಾನ ಬಿಡುಗಡೆಗೆ ಸಹಿ ಹಾಕಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇತ್ತೀಚೆಗೆ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಕೆಲ ಶಾಸಕರು ‘ಗ್ಯಾರಂಟಿ ಯೋಜನೆ ಸೇರಿ ವಿವಿಧ ಕಾರಣಗಳಿಂದ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ.
ಸೋಮವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನ ಕೊರತೆ ಬಗ್ಗೆ ಪ್ರಸ್ತಾಪ ಮಾಡಿದರು. ಆಗ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಭಾನುವಾರವಷ್ಟೇ ಕಡತಕ್ಕೆ ಸಹಿ ಹಾಕಿದ್ದೇನೆ. ಕಾಂಗ್ರೆಸ್ ಶಾಸಕರು ಮಾತ್ರವಲ್ಲ ಎಲ್ಲಾ ಶಾಸಕರಿಗೂ ತಲಾ 10 ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೆಲ ಶಾಸಕರು, 10 ಕೋಟಿ ರೂ. ಅನುದಾನದಿಂದ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಆಗುವುದಿಲ್ಲ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟರು. ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು, ಸದ್ಯಕ್ಕೆ 10 ಕೋಟಿ ರೂ. ಅನುದಾನ ಬಳಕೆ ಮಾಡಿ. ಹೆಚ್ಚುವರಿ ಅನುದಾನ ಬೇಕಿರುವವರು ಫೆಬ್ರವರಿ ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸಿ. 2025-26ನೇ ಸಾಲಿನ ಆಯವ್ಯಯದಲ್ಲಿ ಅನುದಾನಕ್ಕೆ ಅವಕಾಶ ಮಾಡಿಕೊಡಿತುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಜಯಂ ರವಿ ಇನ್ಮುಂದೆ ರವಿ ಮೋಹನ್ – ಹೆಸರು ಬದಲಿಸಿಕೊಂಡ ಖ್ಯಾತ ತಮಿಳು ನಟ!