ಜಮಖಂಡಿ ತಾಲ್ಲೂಕಿನ ಕೃಷ್ಣಾ ನದೀತೀರದ ಹಿಪ್ಪರಗಿಯ ಇಂಚಗೇರಿ ಮಠದ ಕಲ್ಪತರುವಾದ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಶ್ರೀಕೃಷ್ಣನ ಸನ್ನಿಧಿಯಲ್ಲಿ ಆರಂಭವಾಯಿತು. ಇಂಚಗೇರಿಯ ಶ್ರೀ ಸ.ಸ.ಪ್ರಭುಜೀ ಮಾಹಾರಾಜರ ಸಾನಿಧ್ಯದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಇಂಚಗೇರಿಯ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರಯನ್ನು ಚಿತ್ರ ಮಾಡಿ ಎಂದು ನಾನು ಎರಡು ವರ್ಷಗಳ ಹಿಂದೆ ನಿರ್ಮಾಪಕ ಮಾಧವಾನಂದ ಅವರಿಗೆ ತಿಳಿಸಿದೆ. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ರಾಜ್ಯದೆಲ್ಲೆಡೆ ಇಂಚಗೇರಿ ಸಂಪ್ರದಾಯಕ್ಕೆ ಅದರದೆ ಆದ ಮಹತ್ವವಿದೆ. ಅದನ್ನು ಶ್ರೀಸಂಗಮೇಶ್ವರ ಮಹಾರಾಜರು ಪಾಲಿಸಿಕೊಂಡು ಬರುತ್ತಿದ್ದರು. ಕಲಿಯುಗದ ಕಲ್ಪತರುವೆಂದೆ ಖ್ಯಾತರಾಗಿರುವ ಶ್ರೀಸಂಗಮೇಶ್ವರರ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಶ್ರೀಪ್ರಭುಜೀ ಮಹಾರಾಜರು ಆಶೀರ್ವದಿಸಿದರು.
ನಾನು ಈ ಚಿತ್ರದ ಮುಹೂರ್ತಕ್ಕೆ ಬರಲು ನಿರ್ಮಾಪಕ ಹಾಗೂ ನಿರ್ದೇಶಕರು ಇಬ್ಬರು ಕಾರಣ. ಏಕೆಂದರೆ, ಅವರಿಬ್ಬರು ನನ್ನ “ತಾಯಿಸಾಹೇಬ” ಚಿತ್ರದ ಸಮಯದಲ್ಲಿ ಸಹಾಯ ಮಾಡಿದ್ದಾರೆ. ಇನ್ನು ಶ್ರೀಸಂಗಮೇಶ್ವರ ಮಹಾರಾಜರ ಚರಿತ್ರೆ ಕೇಳಿದಾಗ ಆಶ್ಚರ್ಯವಾಯಿತು. ನೀವು ತೆರೆಯಮೇಲೆ ಅವರನ್ನು ಪವಾಡ ಪುರುಷರಂತೆ ತೋರಿಸದೆ, ಮಹಾನ್ ಸಾಧಕರ ರೀತಿ ತೋರಿಸಿ ಎಂದು ಸಲಹೆ ನೀಡಿದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಚಿತ್ರಕ್ಕೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಶ್ರೀಪ್ರಭುಜೀ ಮಹಾರಾಜರು ಹೇಳಿದಂತೆ ಇಂದು ಶ್ರೀ ಸಂಗಮೇಶ್ವರ ಮಹಾರಾಜರ ಕುರಿತಾದ ಚಿತ್ರಕ್ಕೆ ಚಾಲನೆ ದೊರಕಿದೆ. ಚಾಲನೆ ನೀಡಿದ ಪ್ರಭು ಮಹಾರಾಜರಿಗೆ ಹಾಗೂ ಗಿರೀಶ್ ಕಾಸರವಳ್ಳಿ ಅವರಿಗೆ ಧನ್ಯವಾದ. ಮುಂದಿನ ತಿಂಗಳಿನಿಂದ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ನೂತನ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ನಿರ್ದೇಶಕ ರಾಜಾ ರವಿಶಂಕರ್ ತಿಳಿಸಿದರು.
ನಾನು ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಿಸಿದ್ದೆ. ಇದು ಮೂರನೇಯ ಚಿತ್ರ. ಶ್ರೀಸಂಗಮೇಶ್ವರ ಮಹಾರಾಜರ ಸಾಧನೆಗಳು ಅಪಾರ. ಆ ಸಾಧನೆಗಳನ್ನು ಚಿತ್ರದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಮಾಧವಾನಂದ ಯೋಗಪ್ಪ ಶೇಗುಣಸಿ ತಿಳಿಸಿದರು. ತಮ್ಮ ಪಾತ್ರದ ಬಗ್ಗೆ ರವಿ ನಾರಾಯಣ್ ವಿವರಣೆ ನೀಡಿದರು. ಸಂಗೀತ ನಿರ್ದೇಶಕ ಎ.ಟಿ.ರವೀಶ್ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಗು ಇಂಚಗೇರಿ ಸಂಪ್ರದಾಯದ ಭಕ್ತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಶ್ರೀನಿವಾಸ್ ಪ್ರಸಾದ್ – ಸಿಎಂ ಸಿದ್ದು ಭೇಟಿ ಬೆನ್ನಲ್ಲೇ ಬಿಜೆಪಿ ಅಲರ್ಟ್ : ನಾಳೆ ಶ್ರೀನಿವಾಸ್ ಪ್ರಸಾದ್ ಭೇಟಿಗೆ ಕೇಸರಿ ಪಡೆ ಪ್ಲಾನ್..!