ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ದಿನಗಳಲ್ಲಿ ನ್ಯಾಚುರಲ್ ಬ್ಯೂಟಿ ಅಂತ ಹೆಸರಾಗಿರೋ ನಟಿ ಸಾಯಿ ಪಲ್ಲವಿ ಅವರು, ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮೇಜರ್ ಮುಕುಂದ್ ವರದರಾಜನ್ ಬಯೋಪಿಕ್ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗ್ತಿದೆ. ಈಗಾಗಲೇ ಚಿತ್ರತಂಡ ಪ್ರಮೋಷನ್ ಶುರು ಮಾಡಿದೆ. ಈ ವೇಳೆ ಚಿತ್ರದ ಬಗ್ಗೆ ಸಂದರ್ಶನ ನೀಡಿರುವ ನಟಿ ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಯಿ ಪಲ್ಲವಿ ಅವರು ತಮ್ಮ ಕೆರಿಯರ್ನಲ್ಲಿ ಹಳೆಯ ವಿಡಿಯೋದಿಂದ ಆಗಿರುವ ಸಮಸ್ಯೆ ಬಗ್ಗೆ ಸಂದರ್ಶನದಲ್ಲಿ ಮಾತನಾಡಿ, ಪ್ರೇಮಂ ಚಿತ್ರದಲ್ಲಿ ನಟಿಸುವ ಮುನ್ನ ವಿದೇಶದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆ ಡ್ಯಾನ್ಸ್ಗೆ ಸ್ವಲ್ಪ ಆಕರ್ಷಣೀಯವಾಗಿ ಡ್ರೆಸ್ ಹಾಕಿಕೊಂಡರೆ ಚೆನ್ನಾಗಿರುತ್ತದೆ ಅಂತ ಅನಿಸಿ ಹಾಗೆ ಡ್ರೆಸ್ ಮಾಡಿಕೊಂಡು ಡ್ಯಾನ್ಸ್ ಮಾಡಿದ್ದೆ.
‘ಪ್ರೇಮಂ’ ಸಿನಿಮಾ ರಿಲೀಸ್ ಆದಾಗ ಆ ವಿಡಿಯೋ ಕೂಡಾ ವೈರಲ್ ಆಯಿತು. ಅನೇಕರು ವಿಡಿಯೋ ವೈರಲ್ ಮಾಡಿ ಕೆಟ್ಟ ಕಮೆಂಟ್ ಮಾಡಿದ್ದರು. ಆಗ ನಾನು ಇನ್ನು ಮುಂದೆ ಈ ರೀತಿ ಮಾಡಬಾರದು ಎಂದು ನಿರ್ಧರಿಸಿದೆ. ನಾನು ಮಾಂಸದ ದೇಹವಲ್ಲ. ನನ್ನ ದೇಹವನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ನಿರ್ಧಾರ ಮಾಡಿದ್ದೆ.
ನನ್ನ ಪ್ರಸ್ತುತ ಲುಕ್ಗಾಗಿ ಅಭಿಮಾನಿಗಳು ನನ್ನ ಮೇಲೆ ಪ್ರೀತಿ ತೋರಿಸುತ್ತಿರುವಾಗ, ಅದನ್ನು ಏಕೆ ಅನುಸರಿಸಬಾರದು ಮತ್ತು ಅದೇ ಹಾದಿಯಲ್ಲಿ ಯಾಕೆ ಮುಂದುವರಿಯಬಾರದು ಎಂದು ಸಾಯಿ ಪಲ್ಲವಿ ಭಾವುಕರಾಗಿ ಹೇಳಿದ್ದಾರೆ.
ಬಳಿಕ ಆ್ಯಂಕರ್, ಈ ನಿರ್ಧಾರದಿಂದ ದೊಡ್ಡ ನಟರೊಂದಿಗೆ ನಟಿಸುವ ಅವಕಾಶದಿಂದ ವಂಚಿತರಾದಿರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಾಯಿ ಪಲ್ಲವಿ, “ಅವಕಾಶಗಳು ಕಡಿಮೆಯಾಗಲು ಇದೇ ಕಾರಣವಾದರೆ ನನಗೆ ಯಾವುದೇ ತೊಂದರೆ ಇಲ್ಲ. ನನ್ನ ನಟನಾ ಕೌಶಲ್ಯವನ್ನು ನಂಬಿ ಅವಕಾಶ ನೀಡುವವರ ಸಿನಿಮಾಗಳಲ್ಲಿ ನಟಿಸುತ್ತೇನೆ’ ಎಂದು ಉತ್ತರಿಸಿದರು.
ಇದನ್ನೂ ಓದಿ : ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಕಲರ್ಸ್ ಕನ್ನಡ – ಈ ವಾರ ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತಾರಾ ಜಗದೀಶ್?