ತಮಿಳುನಾಡಿನ ಹೊಸೂರು ಸಮೀಪದ ಉದ್ದನಪಲ್ಲಿ ಪ್ರದೇಶದಲ್ಲಿ ಸೆಲ್ ಫೋನ್ ಬಿಡಿಭಾಗಗಳನ್ನು ತಯಾರಿಸುವ ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸಾಲು-ಸಾಲು ಫ್ಯಾಕ್ಟರಿಗಳು ಧಗಧಗನೆ ಹೊತ್ತಿ ಉರಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.
ಟಾಟಾ ಎಲೆಕ್ಟ್ರಾನಿಕ್ಸ್ ಒಡೆತನದ ಸೆಲ್ ಫೋನ್ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಸುಮಾರು 4500 ಮಂದಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಪೇಂಟಿಂಗ್ ಯೂನಿಟ್ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ. ಬಳಿಕ ನೋಡ-ನೋಡುತ್ತಿದ್ದಂತೆ ಬೆಂಕಿ ಇಡೀ ಕಂಪನಿಗೆ ವ್ಯಾಪಿಸಿದೆ.
ಇತರ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ರಾತ್ರಿ ಪಾಳಿಯಲ್ಲಿದ್ದ ಕಾರ್ಮಿಕರನ್ನು ಹೊಗೆ ಆವರಿಸಿದ್ದರಿಂದ ಒಳಗೆ ಇರಿಸಲಾಗಿತ್ತು. ಸ್ವಲ್ಪ ಸಮಯದ ನಂತರ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಕಿ ಅವಘಡದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ. ಅಗ್ನಿ ಅವಘಡದಿಂದಾಗಿ ಇಂದು ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ರಜೆ ಘೋಷಿಸಲಾಗಿದೆ. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದೆ. I-PHONE ಉಪ ಸಲಕರಣೆಗಳನ್ನು ತಯಾರಿಸುತ್ತಿದ್ದ ಕಾರ್ಖಾನೆಯ ಒಂದು ಘಟಕ ಸಂಪೂರ್ಣ ಭಸ್ಮವಾಗಿದೆ. 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿದ್ದು, ರಾಯಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಕಿ ಅವಘಡ ಬೆಳಗ್ಗೆ 5.50ರ ಸುಮಾರಿಗೆ ಸಂಭವಿಸಿದ್ದು, ಶೇಕಡಾ 80ರಷ್ಟು ಮಹಿಳಾ ಕಾರ್ಮಿಕರೇ ಕಾರ್ಖನೆಯಲ್ಲಿ ಕೆಲಸ ಮಾಡ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ‘ಹೆಲೆನ್’ ಚಂಡಮಾರುತದ ಆರ್ಭಟಕ್ಕೆ ತತ್ತರಿಸಿದ ಅಮೆರಿಕ – 40ಕ್ಕೂ ಹೆಚ್ಚು ಮಂದಿ ಸಾವು..!