ಬೆಂಗಳೂರು : ಕಿಡಿಗೇಡಿಯೋರ್ವ ಕಾರಿನ ಗಾಜು ಪುಡಿ ಮಾಡಿ ದರ್ಪ ತೋರಿದ ಘಟನೆ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಿನ್ನೆ ನಡೆದಿತ್ತು. ಘಟನೆಯ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಇದೀಗ ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅನಿಲ್ ರೆಡ್ಡಿ ಎಂದು ಗುರುತಿಸಲಾಗಿದೆ. ಬಂಧಿತನು ಕಾರಿನ ಗಾಜು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದ. ಮಾತ್ರವಲ್ಲದೆ ವೈಪರ್ ತುಂಡು ಮಾಡಿ ಕಾರಿನ ಗಾಜಿನ ಮೇಲೆ ಹೊಡೆದಿದ್ದನು.
ಪ್ರಕರಣದ ಹಿನ್ನೆಲೆ : ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದ ಘಟನೆ ಇದಾಗಿದೆ. ಸರ್ಜಾಪುರ ಮುಖ್ಯ ರಸ್ತೆಯ ದೊಡ್ಡ ಕನ್ನಹಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಕಾರಿನ ಚಾಲಕ ಗುಂಡಿ ಇದೆ ಎಂದು ಬಲ ತಿರುವ ಪಡೆಯಲು ಇಂಡಿಕೇಟರ್ ಬಳಸದೆ ಏಕಾಏಕಿ ನುಗ್ಗಿದ್ದಾನೆ. ಈ ವೇಳೆ ಬೈಕ್ ಸವಾರನಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಅನಿಲ್ ರೆಡ್ಡಿ ಕೆಳಗೆ ಬಿದ್ದಿದ್ದಾನೆ.
ಬಳಿಕ ಸಾವರಿಸಿಕೊಂಡು ಮೇಲೆ ಎದ್ದ ಅನಿಲ್ ರೆಡ್ಡಿ ಕಾರಿನಿಂದ ಕೆಲಗಿಳಿಯುವಂತೆ ಚಾಲಕನಿಗೆ ಹೇಳಿದ್ದಾನೆ. ಕಾರಿನಿಂದ ಚಾಲಕ ಕೆಳಗೆ ಇಳಿಯದೆ ಕುಳಿತಿದ್ದರಿಂದ ಕೋಪಗೊಂಡು ಕಲ್ಲಿನಿಂದ ಗ್ಲಾಸ್ ಪುಡಿ ಮಾಡಿದ್ದಾನೆ. ಘಟನೆ ಸಂಬಂಧ ಕಾರು ಚಾಲಕನಿಂದ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ FIR ದಾಖಲಿಸಿ ಬೆಳ್ಳಂದೂರು ಪೊಲೀಸರು ಅನಿಲ್ ರೆಡ್ಡಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಫುಟ್ಬಾಲ್ ಆಟದಲ್ಲಿ ಕಿರಿಕ್ – ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿ ಅರೆಬೆತ್ತಲೆಗೊಳಿಸಿ ಹಲ್ಲೆ..!