ಬೆಂಗಳೂರು : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಜೊತೆಗೆ ಅವರ ನಟನೆಯ ಕಾಂತಾರ ಸಿನಿಮಾ ಮನರಂಜನಾ ಸಿನಿಮಾ ಪ್ರಶಸ್ತಿಗೆ ಭಾಜನವಾಗುವ ಮೂಲಕ ಕನ್ನಡಿಗರ ಕೀರ್ತಿ ಮತ್ತು ಸ್ಯಾಂಡಲ್ವುಡ್ ಛಾಪನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಪ್ರಶಸ್ತಿ ಬಂದ ಖುಷಿಯಲ್ಲಿ ನಟ ರಿಷಬ್ ಶೆಟ್ಟಿ ಬಿಟಿವಿ ಜೊತೆ ಮಾತನಾಡಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ.
ಕಾಂತಾರಾಗೆ ಪ್ರಶಸ್ತಿ ಬಂದಿರೋದು ನನಗೆ ಖುಷಿ ತಂದಿದೆ. ಈ ಪ್ರಶಸ್ತಿಯನ್ನು ನಾನು ದೈವಕ್ಕೆ ಅರ್ಪಿಸುತ್ತೇನೆ. ನಮ್ಮ ಶ್ರಮಕ್ಕೆ ಪ್ರಶಸ್ತಿಯ ಪ್ರತಿಫಲ ಸಿಕ್ಕಿದೆ. ಇದು ನನಗೆ ಸಿಕ್ಕ ಪ್ರಶಸ್ತಿ ಅಲ್ಲ, ಇಡೀ ತಂಡಕ್ಕೆ ಸಿಕ್ಕ ಪ್ರಶಸ್ತಿ, ಎಲ್ಲರ ಸಹಕಾರದಿಂದ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನ ಹೆಚ್ಚಿಸಿದೆ. ಉತ್ತಮ ಸಿನಿಮಾ ನೀಡುವ ಹೊಣೆ ಹೆಚ್ಚಿದೆ ಎಂದು ಶೆಟ್ರು ಸಂತಸ ಹಂಚಿಕೊಂಡಿದ್ದಾರೆ.
ಇಡೀ ತಂಡದ ಶ್ರಮ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿಕೊಂಡು ಬಂದು ಇವತ್ತು ಕೂಡ ನಾನು ಅದೇ ಟೀಂ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಇಡೀ ತಂಡಕ್ಕೆ ಅರ್ಪಿಸುತ್ತೇನೆ. ಜನರು ಸಿನಿಮಾ ಮೆಚ್ಚಿಕೊಳ್ಳೋದು ತುಂಬಾ ಮುಖ್ಯವಾಗುತ್ತದೆ. ಜನರು ಒಂದು ಕಿರೀಟವನ್ನು ಕೊಟ್ಟಿರುತ್ತಾರೆ. ಅದರ ಮೇಲೆ ಒಂದು ಗರಿಯಂಥಾ ಪ್ರಶಸ್ತಿ ದೊಡ್ಡ ಜವಾಬ್ದಾರಿಯಾಗುತ್ತೆ. ಇನ್ನು ಮುಂದೆ ಜವಾಬ್ದಾರಿಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕಾಗುತ್ತೆ.
ಇಡೀ ತಂಡಕ್ಕೆ ಧನ್ಯವಾದ ಹೇಳಬೇಕು. ಡಿಓಪಿ ಅರವಿಂದ್ ಕಶ್ಯಪ್. ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಶೆಟ್ಟಿ. ಈ ಸಿನಿಮಾವನ್ನು ಮಾಡಲೇಬೇಕು ಎಂದು ಒತ್ತಾಯಿಸಿದ್ದು ನನ್ನ ಹೆಂಡತಿ. ನನ್ನ ಮಗಳು ಅವಳ ಹೊಟ್ಟೆಯಲ್ಲಿದ್ದಳು, ಹೊಟ್ಟೆಯಲ್ಲಿ ಇಟ್ಟುಕೊಂಡೇ ಎಲ್ಲಾ ಕೆಲಸ ಮಾಡಿದ್ದಳು. ಅವಳಿಗೆ ಥ್ಯಾಂಕ್ಸ್ ಹೇಳೋಕೆ ಇಷ್ಟಪಡುತ್ತೇನೆ. ಅದ್ಭುತವಾದ ಸಂಗೀತವನ್ನು ಕೊಟ್ಟು ಸಿನಿಮಾವನ್ನು ಚಂದಗಾಣಿಸಿದ ಅಜನೀಶ್ ಲೋಕನಾಥ್ ಧನ್ಯವಾದಗಳು. ಅವರದ್ದು ಕಾಂತಾರಕ್ಕೆ ದೊಡ್ಡ ಕೊಡುಗೆ ಎಂದು ಬಿಟಿವಿ ಜೊತೆ ರಿಷಬ್ ಶೆಟ್ಟಿ ಸಂಭ್ರಮ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ‘ಕಾಂತಾರ’ದ ಮುಡಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ – ರಿಷಬ್ ಶೆಟ್ಟಿಗೆ ಒಲಿದ ಬೆಸ್ಟ್ ನಟ ಅವಾರ್ಡ್..!