ಬುಡಾಪೆಸ್ಟ್‌ನಲ್ಲಿ ಇತ್ತೀಚೆಗಷ್ಟೇ ನಡೆದಿದ್ದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ತಂಡಕ್ಕೆ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಭರ್ಜರಿ ಬಹುಮಾನ ಘೋಷಣೆ ಮಾಡಿದೆ.
ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ ಎಲ್ಲ ಆಟಗಾರರನ್ನು ಸನ್ಮಾನಿಸಿದ ಎಐಸಿಎಫ್, ಚೆಸ್ ಒಲಿಂಪಿಯಾಡ್‌ನಲ್ಲಿ ವಿಜೇತ ತಂಡಗಳಿಗೆ 3 ಕೋಟಿ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಅದರಂತೆ ವಿಜೇತ ತಂಡದ ಪ್ರತಿಯೊಬ್ಬ ಸದಸ್ಯರಿಗೆ ತಲಾ 25 ಲಕ್ಷ ರೂ ಬಹುಮಾನ ಸಿಕ್ಕರೆ, ಪುರುಷ ಮತ್ತು ಮಹಿಳಾ ತಂಡದ ಕೋಚ್‌ಗಳಾದ ಅಭಿಜಿತ್ ಕುಂಟೆ ಮತ್ತು ಶ್ರೀನಾಥ್ ನಾರಾಯಣ್‌ಗೆ ತಲಾ 15 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್ ತಿಳಿಸಿದರು. ಇದಲ್ಲದೇ ಭಾರತ ತಂಡದ ಮುಖ್ಯಸ್ಥ ಗ್ರ್ಯಾಂಡ್ ಮಾಸ್ಟರ್ ದಿವ್ಯೇಂದು ಬರುವಾ ಅವರಿಗೆ 10 ಲಕ್ಷ ರೂ, ಸಹಾಯಕ ಕೋಚ್‌ಗಳಿಗೆ 7.5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
97 ವರ್ಷಗಳ ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಪುರುಷ ಮತ್ತು ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದ ಸಾಧನೆ ಮಾಡಿದೆ. ಪುರುಷರ ತಂಡ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಸ್ಲೊವೇನಿಯಾ ತಂಡವನ್ನು 3.5- 0.5ರಿಂದ ಸೋಲಿಸಿದರೆ, ಮಹಿಳೆಯರ ತಂಡ ಅದೇ ಅಂತರದಿಂದ ಅಜರ್‌ಬೈಜಾನ್ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.