ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಗಳು ನಡೆಯುತ್ತಲೇ ಇವೆ. ಆ ಪ್ರಯತ್ನಗಳು ಸೋತ್ರು ಗೆದ್ರು ಹೊಸಬರು ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ. ಅದರಂತೆ ಈಗ ಹೊಸ ತಂಡವೊಂದು ಸೇರಿಕೊಂಡು ರಾವಣಾಪುರ ಎಂಬ ಸಿನಿಮಾ ಮಾಡಿದ್ದು, ಈ ಚಿತ್ರವೀಗ ತೆರೆಗೆ ಬರಲು ಸಜ್ಜಾಗಿದೆ. ರಾವಣಾಪುರ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಇತ್ತೀಚಿಗೆ ನೆರವೇರಿದೆ. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಟ್ರೇಲರ್ ಬಿಡುಗಡೆ ಬಳಿಕ ನಿರ್ದೇಶಕ ಕುಮಾರ್ ಎಂ ಬಾವಗಳ್ಳಿ ಅವರು, ಸಿನಿಮಾ ಟೆಕ್ನಿಕಲ್ ಆಗಿ ತುಂಬಾ ಸ್ಟ್ರಾಂಗ್ ಆಗಿದೆ. ಹಳೆ ವಿಷಯವನ್ನು ಇವತ್ತಿನ ಪೀಳಿಗೆಗೆ ಹೋಲುವಂತೆ ಚಿತ್ರ ಮಾಡಿದ್ದೇವೆ. ನನ್ನ ಸ್ನೇಹಿತರೊಬ್ಬರ ಜೀವನದಲ್ಲಿ ಒಂದು ಘಟನೆ ನಡೆಯಿತು. ಅದನ್ನು ತೆಗೆದುಕೊಂಡು ಸಿನಿಮಾ ಮಾಡಿದ್ದೇನೆ. ಇದು ನನ್ನ ಮೊದಲ ಪ್ರಯತ್ನ. ಪ್ರತಿಯೊಂದು ಚಿತ್ರವು ಗೆಲ್ಲಬೇಕು ಅಂತಾ ಪ್ರತಿಯೊಬ್ಬ ನಿರ್ದೇಶಕರು ಬರುತ್ತಾರೆ. ತಪ್ಪು ಇದ್ದರೆ ತಿದ್ದಿಕೊಂಡು ಮುಂದೆ ಹೆಜ್ಜೆ ಇಡುತ್ತೇನೆ ಎಂದರು.
ರಾವಣಾಪುರ ಸಿನಿಮಾದಲ್ಲಿ ರತ್ನನ್ ಕಲ್ಯಾಣ್, ರಕ್ಷಾ, ದಿಲೀಪ್ ಕುಮಾರ್ ಎಂ, ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಎಪಿ ಶ್ರೀನಾಥ್, ಸೂರ್ಯ ಆರ್ ಎನ್, ಮಂಜುನಾಥ್ ಎಲ್, ವಿಶಾಲ್ ಸಂಜಯ್ ಮತ್ತು ರಾಜೇಶ್ವರಿ ಸೇರಿದಂತೆ ಮತ್ತಿತರರು ನಟಿಸಿದ್ದಾರೆ. ಸಿಂಗನಲ್ಲೂರು ಚೌಡೇಶ್ವರಿ ಕಂಬೈನ್ಸ್ ಬ್ಯಾನರ್ನಡಿ ಎಲ್ ನಾಗಭೂಷಣ ನಿರ್ಮಾಣ ಮಾಡಿದ್ದು, ಪ್ರಭು ಸಂಗೀತ, ಆನಂದ್ ಇಳಯರಾಜ ಛಾಯಾಗ್ರಹಣ ಚಿತ್ರಕ್ಕಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದ ರಾವಣಾಪುರ ಇದೇ ಜನವರಿ 17ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.
ಇದನ್ನೂ ಓದಿ : 6 ಮಕ್ಕಳ ತಾಯಿಗೆ ಬಿಕ್ಷುಕನ ಮೇಲೆ ಪ್ರೇಮಾಂಕುರ – ಗಂಡ, ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿ..!