ಬಳ್ಳಾರಿ : ಮಾರ್ಚ್ 1 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ NIA ಅಧಿಕಾರಿಗಳು ಬಳ್ಳಾರಿಯಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಬಳ್ಳಾರಿ ಮೂಲದ ಶಬ್ಬೀರ್ನನ್ನು NIA ತಂಡ ವಶಕ್ಕೆ ಪಡೆದಿದೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಯುವಕನಿಗೂ ಲಿಂಕ್ ಇರುವ ಅನುಮಾನದ ಮೇಲೆ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಎನ್‌ಐಎ ವಶಕ್ಕೆ ಪಡೆದ ಶಬ್ಬೀರ್, ತೋರಣಗಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಚ್. 01ನೇ ತಾರೀಖು 9 ಗಂಟೆ 10 ನಿಮಿಷಕ್ಕೆ ಬುಡಾ ಕಾಂಪ್ಲೆಕ್ಸ್ ಬಳಿ ಶಂಕಿತ ಉಗ್ರನನ್ನ ಭೇಟಿಯಾಗಿದ್ದ. ಹಾಗೂ ಶಬ್ಬೀರ್, ಶಂಕಿತನನ್ನು ಫೋನ್ ಮೂಲಕ ಸಂಪರ್ಕ ಮಾಡಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಎಲ್ಲಾ ಅನುಮಾನದ ಮೇಲೆ ಎನ್‌ಐಎ ಅಧಿಕಾರಿಗಳು ಶಬ್ಬೀರ್ನನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಎನ್‌ಐಎ ಅಧಿಕಾರಿಗಳು ಶಬ್ಬೀರನ ಹಿನ್ನೆಲೆ ಕೆದುಕುತ್ತಿದ್ದಾರೆ. ಶಬ್ಬೀರನ ಅಣ್ಣನ ಮಕ್ಕಳಿಂದ ಶಂಕಿತ ಬಾಂಬರ್‌ನ ಪರಿಚಯವಾಗಿತ್ತು. ಶಂಕಿತನ ಪರಿಚಯದ ಬಗ್ಗೆ ಶಬ್ಬೀರ್ ಮಾಹಿತಿ ಬಿಚ್ಚಿಟ್ಟಿದ್ದಾನೆ. ಬಳ್ಳಾರಿ ಹೊಸ ಬಸ್ ನಿಲ್ದಾಣದಿಂದ ಬುಡಾ ಕಾಂಪ್ಲೆಕ್ಸ್ ಬಳಿ ಆಟೋದಲ್ಲಿ ಬಂದು ಇಳಿದಿದ್ದ ಶಂಕಿತ ಬಾಂಬರ್ ಬಳಿಕ ಶಬ್ಬೀರನನ್ನ ಭೇಟಿ ಮಾಡಿದ್ದ. ಸದ್ಯ ಈ ಭೇಟಿಯ ಸಿಸಿ ಟಿವಿ ಫೋಟೋಜ್ ಆಧಾರದ ಮೇಲೆ ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿ NIA ಘೋಷಣೆ ಮಾಡಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು NIA ಚುರುಕುಗೊಳಿಸಿದ್ದು, ಶಂಕಿತ ಆಂಧ್ರ ಪ್ರದೇಶದ ತಿರುಪತಿ ಅಥವಾ ಹೈದ್ರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸದ್ಯ ಆತನ ಬಂಧನಕ್ಕೆ ಪೊಲೀಸರು ವಿವಿಧ ರೀತಿಯಲ್ಲಿ lಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹಿಟ್ ಆಯ್ತು ‘ರಾನಿ’ ಚಿತ್ರದ ‘ಕೋಲೆ ಕೋಲೆ’ ಸಾಂಗ್..!