ಬೆಂಗಳೂರು : ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ತುಮಕೂರು – ದಾವಣಗೆರೆ ಮತ್ತು ಗದಗ- ವಾಡಿ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ₹ 93.32 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಬಗ್ಗೆ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ತುಮಕೂರು ದಾವಣಗೆರೆ ರೈಲ್ವೆ ಯೋಜನೆಗೆ ₹50 ಮತ್ತು ಗದಗ ವಾಡಿ ರೈಲ್ವೆ ಯೋಜನೆಗೆ ₹ 43. 32 ಕೋಟಿ ಬಿಡುಗಡೆ ಮಾಡಲಾಗಿದೆ. ಹಾಗೆಯೇ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತವಾದ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಪೈಕಿ ₹ 43.01 ಕೋಟಿಯನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಮತ್ತು ₹ 14.62 ಕೋಟೆಯನ್ನು ರಾಯಚೂರು ವಿಮಾನ ನಿಲ್ದಾಣಕ್ಕೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ರೈಲು ಯೋಜನೆಗಳು ಕೇಂದ್ರ ಸರ್ಕಾರಕ್ಕೆ ಸೇರಿದ್ದರೂ ಕೆಲವು ಯೋಜನೆಗಳಿಗೆ ತಗಲುವ ಒಟ್ಟು ವೆಚ್ಚದಲ್ಲಿ ಶೇ.50 ರಷ್ಟನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಎರಡೂ ಯೋಜನೆಗಳ ವ್ಯಾಪ್ತಿಯಲ್ಲಿ ಅಂತಿಮ ಹಂತದಲ್ಲಿದೆ. ಇದು ಮುಗಿದ ತಕ್ಷಣ ಕಾಮಗಾರಿಗಳು ವೇಗ ಪಡೆಯಲಿವೆ ಎಂದಿದ್ದಾರೆ.
ತುಮಕೂರನ್ನು ಮಧ್ಯಕರ್ನಾಟಕದೊಂದಿಗೆ ಬೆಸೆಯಲಿರುವ ತುಮಕೂರು- ದಾವಣಗೆರೆ ರೈಲ್ವೆ ಯೋಜನೆ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಭಾಗಗಳಿಗೆ ತ್ವರಿತಗತಿಯಲ್ಲಿ ರೈಲು ಸಂಚಾರ ಸಾಧ್ಯವಾಗಲಿದೆ. ಹಾಗೆಯೇ ಗದಗ, ವಾಡಿ ರೈಲು ಮಾರ್ಗದ ಅಭಿವೃದ್ಧಿಯಿಂದ ಹುಬ್ಬಳ್ಳಿ ಒಳಗೊಂಡಂತೆ ಕಿತ್ತೂರು ಕರ್ನಾಟಕ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಿಗೆ ಸುಲಭವಾಗಿ ತಲುಪಬಹುದಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಇದನ್ನೂ ಓದಿ : ನಾನು ಗುತ್ತಿಗೆದಾರರಿಂದ ಹಣ ಪಡೆದಿದ್ದೇನೆ ಅಂತಾ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ : ಸಿಎಂ ಸಿದ್ದರಾಮಯ್ಯ..!