ಬೆಂಗಳೂರು : ರಾಜಧಾನಿ ಬೆಂಗಳೂರಿನ ಬಿ. ಮಾರೇನಹಳ್ಳಿಯಲ್ಲಿ ಖ್ಯಾತ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ನ ಅತ್ಯಾಧುನಿಕ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ, ಜ.19ರಂದು ಬೆಳಗ್ಗೆ ಲೋಕಾರ್ಪಣೆ ಮಾಡಿದ್ದಾರೆ. ಬೋಯಿಂಗ್ ಕ್ಯಾಂಪಸ್ ಉದ್ಘಾಟನಾ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಗವರ್ನರ್ ತಾವರ್ಚಂದ್ ಗೆಹ್ಲೋಟ್, ಆರ್.ಅಶೋಕ್, ಬೋಯಿಂಗ್ ಟೆಕ್ ಮುಖ್ಯಸ್ಥರು ಮೋದಿ ಜೊತೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಇಂದಿನ ಯುವಪೀಳಿಗೆಯ ಆಕಾಂಕ್ಷೆಗಳನ್ನು ನಾವೀನ್ಯತೆಯೊಂದಿಗೆ ಹಾಗೂ ಸಾಧನೆಯೊಂದಿಗೆ ಸಂಪರ್ಕಿಸುತ್ತದೆ. ಅಲ್ಲದೆ, ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಬೇಡಿಕೆಯೊಂದಿಗೆ ಸಂಪರ್ಕಿಸುತ್ತದೆ ಎಂದು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಹೀಗೆ ಭಾಷಣ ಮಾಡುತ್ತಿದ್ದಾಗ, ಭಾರತದಲ್ಲಿ ಸುಭದ್ರ ಸರ್ಕಾರವಿದೆ ಅಂತ ಹೇಳಿದ್ದಾರೆ. ಈ ಸಂದರ್ಭ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಜನರು, ಮೋದಿ… ಮೋದಿ ಎಂದು ಜೋರಾಗಿ ಕೂಗಿದ್ದಾರೆ. ಪ್ರಧಾನಿ ಭಾಷಣದ ವೇಳೆ ಆಗಾಗ ಈ ರೀತಿಯ ಕೂಗು ಸಭಿಕರಿಂದ ಕೇಳಿಬರುತ್ತಿತ್ತು. ಆಗ ಮೋದಿ ಭಾಷಣ ನಿಲ್ಲಿಸಿದರು. ಸಿದ್ದರಾಮಯ್ಯ ನಗೋಕೆ ಶುರು ಮಾಡಿದರು. ಆಗ ಪ್ರಧಾನಿ ಮೋದಿ, “ಮುಖ್ಯಮಂತ್ರಿ ಜೀ… ಐಸಾ ಹೋತಾ ರಹತಾ ಹೇ…” (ಮುಖ್ಯಮಂತ್ರಿಗಳೇ ಇದು ಆಗ್ಗಾಗ್ಗ ನಡೆಯುತ್ತಾ ಇರುತ್ತೆ) ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮೋದಿ ಕಾಲೆಳೆದಿದ್ದಾರೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ದೇಶಾದ್ಯಂತ ಹೆಚ್ಚು ಹೆಣ್ಣು ಮಕ್ಕಳು ವೈಮಾನಿಕ ವಲಯಕ್ಕೆ ಸೇರಲು ನೆರವಾಗುವ ಬೋಯಿಂಗ್ ಸುಕನ್ಯಾ ಯೋಜನೆಗೂ ಮೋದಿ ಚಾಲನೆ ಕೊಟ್ಟರು. ಕಾರ್ಯಕ್ರಮ ಮುಗಿಸಿ ಪ್ರಧಾನಿ ಮೋದಿ ಚೆನ್ನೈಗೆ ತೆರಳಿದರು. ಚೆನ್ನೈನಲ್ಲಿ ಮೋದಿ ಭರ್ಜರಿ ರೋಡ್ಶೋ ನಡೆಸಿದ್ದಾರೆ.
ಇದನ್ನೂ ಓದಿ : ಇಂದು ಬಜೆಟ್ ಪೂರ್ವಭಾವಿ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ..!