ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಬರುತ್ತಿವೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ರಂಗಭೂಮಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿರುವ ಪ್ರತಿಭಾನ್ವಿತರ ತಂಡವೊಂದು ಚಿತ್ರರಂಗಕ್ಕೆ ಆಗಮಿಸಿದೆ. ಈ ಸಿನಿಮಾ ವ್ಯಾಮೋಹಿಗಳ ತಂಡದ ಕಡೆಯಿಂದ ರೂಪುಗೊಂಡಿರುವ ಚಿತ್ರ `ಪ್ರಕರಣ ತನಿಖಾ ಹಂತದಲ್ಲಿದೆ’.
`ಪ್ರಕರಣ ತನಿಖಾ ಹಂತದಲ್ಲಿದೆ’ ಶೀರ್ಷಿಕೆಯಲ್ಲಿಯೇ ಕಥೆಯ ಬಗೆಗಿನ ನಿಗೂಢ ಬಚ್ಚಿಟ್ಟುಕೊಂಡಂತಿರುವ ಈ ಚಿತ್ರವನ್ನು ಸುಂದರ್.ಎಸ್ ನಿರ್ದೇಶನ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಗೊಂಡಿದೆ. ಈ ಮೂಲಕವೇ ಸದರಿ ಚಿತ್ರದ ಬಗ್ಗೆ ನಾನಾ ಆಯಾಮಗಳಲ್ಲಿ ನಿರೀಕ್ಷೆಗಳು ಮೂಡಿಕೊಂಡಿವೆ.
ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಚಿಂತನ್ ಕಂಬಣ್ಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದರ ಪೋಸ್ಟರ್ ಒಂದು ಬಿಡುಗಡೆಗೊಂಡಿತ್ತು. ಆ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರತಂಡವೀಗ ಟೈಟಲ್ ಟ್ರ್ಯಾಕ್ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ತೀವ್ರವಾಗಿ ಸೆಳೆದುಕೊಂಡಿದೆ. ಇದು ಕ್ರೈಂ ಜಾನರಿನ ಚಿತ್ರವಾಗಿದ್ದು, ಒಂದು ಪ್ರಕರಣದ ತನಿಖೆಯ ಸುತ್ತ ಸಾಗುವ ರೋಚಕ ಕಥನದೊಂದಿಗೆ ಇದನ್ನು ರೂಪಿಸಲಾಗಿದೆಯಂತೆ. ಆಗಾಗ ಕನ್ನಡದಲ್ಲಿ ಈ ಜಾನರಿನ ಚಿತ್ರಗಳು ತೆರೆಗಾಣುತ್ತಿರುತ್ತವೆ. ಅದೆಲ್ಲಕ್ಕಿಂತಲೂ ಭಿನ್ನವಾದ ಅಂಶಗಳು ಇಲ್ಲಿವೆ ಎಂಬ ತುಂಬು ಭರವಸೆ ಚಿತ್ರತಂಡದಲ್ಲಿದೆ.
ರಂಗಭೂಮಿಯಲ್ಲಿ ಸಕ್ರಿಯವಾಗಿದ್ದುಕೊಂಡು, ವರ್ಷಾಂತರಗಳಿಂದ ತಯಾರಿ ನಡೆಸಿದ್ದ ತಂಡವೊಂದು ಈ ಚಿತ್ರದ ಹಿಂದಿದೆ. ಅವರೆಲ್ಲರೂ ರಂಗಭೂಮಿಗೆ ಹಳಬರಾದರೂ, ಚಿತ್ರರಂಗಕ್ಕೆ ಹೊಸಬರು. ಸಿದ್ಧಸೂತ್ರದಾಚೆಗೆ ಏನೋ ಮಾಡಬೇಕೆಂಬ ತುಡಿತವನ್ನು ಈ ತಂಡ `ಪ್ರಕರಣ ತನಿಖಾ ಹಂತದಲ್ಲಿದೆ’ ಮೂಲಕ ಸಾಕಾರಗೊಳಿಸಿದೆಯಂತೆ. ಮಹೀನ್ ಕುಬೇರ್ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್.ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಮುಂತಾದವರ ತಾರಾಗಣವಿದೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ ಛಾಯಾಗ್ರಹಣ, ಶಿವೋಂ ಸಂಗೀತ ನಿರ್ದೇಶನ ಮತ್ತು ನಾನಿಕೃಷ್ಣ ಸಂಕಲನ ಈ ಚಿತ್ರಕ್ಕಿದೆ. ವಿಎಫ್ ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ನಿಭಾಯಿಸಿದ್ದಾರೆ. ಬೆಂಗಳೂರು, ಕನಕಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಟ್ರೈಲರ್ ಬಿಡುಗಡೆಗೊಳಿಸಿ, ಅದಾದ ಬಳಿಕ ಈ ಸಿನಿಮಾ ಬಿಡುಗಡೆ ದಿನಾಂಕ ಘೋಶಣೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್ ಯತ್ನ ಕೇಸ್ – ನಿನ್ನೆ ಮಿಡ್ನೈಟ್ನಲ್ಲಿ ಆಗಿದ್ದೇನು?