ವೈಜಯಂತಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಕಲ್ಕಿ 2898 ಎಡಿ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿದೆ. ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ವರ್ಗ ಮೂಕವಿಸ್ಮಿತನಾಗಿದ್ದ. ನಿರ್ದೇಶಕ ನಾಗ್ ಅಶ್ವಿನ್ ಅವರ ಕೈ ಚಳಕಕ್ಕೂ ಬಹುಪರಾಕ್ ಸಿಕ್ಕಿತ್ತು. ಅಭಿಮಾನಿಗಳಿಂದಲೂ ಪ್ರಭಾಸ್ ಹೊಸ ಅವತಾರಕ್ಕೆ ಮೆಚ್ಚುಗೆಯ ಮಹಾಪೂರವೇ ಸಿಕ್ಕಿತ್ತು. ಸಲಾರ್‌ಗೂ ಮುನ್ನ ಸರಣಿ ಸೋಲು ಅನುಭವಿಸಿದ್ದ ಪ್ರಭಾಸ್‌ಗೀಗ ಕಲ್ಕಿ ಸಿನಿಮಾ ಮೂಲಕ ಮತ್ತೆ ಮರು ಜೀವ ಸಿಕ್ಕಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಯಾಗಿಯೇ ಅಚ್ಚೊತ್ತಿಕೊಂಡಿದ್ದಾರೆ ಪ್ರಭಾಸ್. ಕಲ್ಕಿ ಸಿನಿಮಾ ಅಂಥದ್ದೊಂದು ದೊಡ್ಡ ಗೆಲುವನ್ನು ಪ್ರಭಾಸ್ ಅವರಿಗೆ ನೀಡಿದೆ. ಫ್ಯಾಂಟಸಿ ಸಿನಿಮಾ ಮೂಲಕ, ಕಣ್ಣಿಗೆ ಅಚ್ಚರಿ ಎನಿಸುವ ದೃಶ್ಯಾವಳಿಗಳನ್ನೇ ನೋಡುಗರಿಗೆ ನೀಡಿ, ಮಾಸ್ ಆಕ್ಷನ್ ಸೀನ್‌ಗಳಿಂದ ಸಮೃದ್ಧವಾದ ಚಿತ್ರವನ್ನೇ ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ಪ್ರಭಾಸ್. ತಮ್ಮ ಗಮನಾರ್ಹವಾದ ಆನ್- ಸ್ಕ್ರೀನ್ ಪಾತ್ರದಿಂದಲೇ ಗಮನ ಸೆಳೆದ ಪ್ರಭಾಸ್, ಜಾಗತಿಕ ಅಭಿಮಾನಿಗಳಿಗೂ ಹಬ್ಬದೂಟ ಹಾಕಿಸಿದ್ದಾರೆ.
ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ ಅವರ ‘ಕಲ್ಕಿ 2898 AD’ ಸಿನಿಮಾ ವೀಕ್ಷಿಸಲು ಜಪಾನ್‌ನಿಂದ ಹೈದರಾಬಾದ್‌ಗೆ ಆಗಮಿಸಿತ್ತು. ಈ ಅದ್ಭುತ ಗೆಸ್ಚರ್ ಸೂಪರ್‌ಸ್ಟಾರ್‌ನ ಜಾಗತಿಕ ಸ್ಟಾರ್‌ಡಮ್‌ಗೆ ಹಿಡಿದ ಸಾಕ್ಷಿ.
ಚಿತ್ರದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್, ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಐಕಾನಿಕ್ ‘ರೆಬೆಲ್’ ಟ್ರಕ್ ಪಕ್ಕದಲ್ಲಿ ನಿಂತಿರುವ ಮೂವರು ಜಪಾನೀ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದೆ. ಪ್ರಭಾಸ್ ಪಾತ್ರದ ಭೈರವ ಮತ್ತು ಬುಜ್ಜಿ ವಾಹನದ ಫೋಟೋ ಇರುವ ವಿಶೇಷ ಬಾವುಟ ಹಿಡಿದು “ಕಲ್ಕಿ 2898 AD. ಬಿಡುಗಡೆಗೆ ಅಭಿನಂದನೆಗಳು!! ಜಪಾನಿನ ಅಭಿಮಾನಿಗಳಿಂದ 2024.6.27.” ಎಂದು ಜಪಾನಿನ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.
‘ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲುತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.
‘ಬಾಹುಬಲಿ’ಯಿಂದ ‘ಸಲಾರ್’, ‘ಕಲ್ಕಿ 2898 AD’ ವರೆಗೆ ಪ್ರಭಾಸ್ ತಮ್ಮ ಸ್ಟಾರ್ ಪವರ್‌ಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಸಮಕಾಲೀನ ಸಿನಿಮಾರಂಗದಲ್ಲಿ ಅತ್ಯಂತ ಅಪ್ರತಿಮ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಪ್ರಭಾಸ್. ಅಂದಹಾಗೆ ನಾಗ್ ಅಶ್ವಿನ್ ನಿರ್ದೇಶಿಸಿದ, ‘ಕಲ್ಕಿ 2898 AD’ 2898 AD ವರ್ಷದಲ್ಲಿ ಹಿಂದೂಗಳ ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ಆಕ್ಷನ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಲೆಜಂಡರಿ ಕಲಾವಿದರಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ : ಮುಂಬೈ ಕಡಲ ಕಿನಾರೆಯಲ್ಲಿ ‘ವಿಶ್ವ’ಗೆದ್ದ ವೀರರನ್ನು ಕಣ್ತುಂಬಿಕೊಂಡ ಫ್ಯಾನ್ಸ್, ವಿಜಯೋತ್ಸವದ ಫೋಟೋಸ್ ನೋಡಿ..!