ಪ್ಯಾನ್ ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿರುವ ನಟ ಪ್ರಭಾಸ್, ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಅಕ್ಟೋಬರ್ 23ರಂದು ಪ್ರಭಾಸ್ ಅವರ ಹುಟ್ಟುಹಬ್ಬ. ಈ ನಿಮಿತ್ತ ಅವರ ಹಲವು ಸಿನಿಮಾಗಳಿಂದ ಬಗೆಬಗೆ ಸರ್ಪ್ರೈಸ್‌ಗಳು ಅಭಿಮಾನಿಗಳಿಗೆ ಸಿಗಲಿವೆ. ಜತೆಗೆ ಹೊಸ ಸಿನಿಮಾಗಳ ಘೋಷಣೆ ಆಗುವ ಸಾಧ್ಯತೆಯೂ ಇದೆ. ಆದರೆ, ಇದೆಲ್ಲದರ ಜತೆಗೆ ಸದ್ಯ ಒಪ್ಪಿಕೊಂಡಿರುವ ಐದು ಸಿನಿಮಾಗಳ ಬಜೆಟ್ ಕಡೆ ಒಮ್ಮೆ ಇಣುಕಿದರೆ ಅಚ್ಚರಿಯಾಗಬಹುದು. ಬರೋಬ್ಬರಿ ಪ್ರಭಾಸ್ ಅವರ 5 ಸಿನಿಮಾಗಳ ಒಟ್ಟು ಬಜೆಟ್ಟೇ 2100 ಕೋಟಿಗೂ ಅಧಿಕ.
ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಖ್ಯಾತಿ ಗಿಟ್ಟಿಸಿಕೊಂಡು, ಪ್ರಭಾಸ್ ದೇಶವ್ಯಾಪಿ ಹೆಸರು ಮಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ನಟ ಪ್ರಭಾಸ್ ಅವರ ಸಿನಿಮಾಗಳು ಮಾಡಿದ ಮೋಡಿಯೂ ಸಣ್ಣದೇನಲ್ಲ. ಹಲವು ದಾಖಲೆಗಳನ್ನೂ ಸೃಷ್ಟಿಸಿದ್ದಾರೆ. ಇದೀಗ ಇದೇ ಬರ್ತ್‌ಡೇ ಬಾಯ್ ಅವರ ಈ ಸಕ್ಸಸ್ ಜರ್ನಿ ಹೇಗಿತ್ತು ಇಲ್ಲಿದೆ ನೋಡಿ.
ಬಾಕ್ಸ್ ಆಫೀಸ್ ದಾಖಲೆ : ಪ್ರಭಾಸ್ ಅವರ ಸಿನಿಮಾಗಳು ತಮ್ಮ ಸಿನಿಮಾಗಳ ದಾಖಲೆಯನ್ನೇ ದಿನದಿಂದ ದಿನಕ್ಕೆ ಮುರಿದು ಮುನ್ನಡೆಯುತ್ತಿವೆ. ಬಾಹುಬಲಿ : ದಿ ಬಿಗಿನಿಂಗ್ ಮೊದಲ ದಿನ 75 ಕೋಟಿ ಗಳಿಸಿ ಇತಿಹಾಸ ನಿರ್ಮಿಸಿತು. ಇದರ ನಂತರ ಬಾಹುಬಲಿ : ದಿ ಕನ್‌ಕ್ಲೂಷನ್, ಬಾಕ್ಸ್ ಆಫೀಸ್‌ನಲ್ಲಿ ಬೆರಗುಗೊಳಿಸುವ ಮೂಲಕ ಮೊದಲ ದಿನ 200 ಕೋಟಿ ಗಳಿಸಿತು. ಸಾಹೋ ಮೊದಲ ದಿನ 130 ಕೋಟಿ ಗಳಿಸಿದರೆ, ಸಲಾರ್ 178 ಕೋಟಿ ಕಲೆಕ್ಷನ್ ಮಾಡಿತು. ಕಲ್ಕಿ 2898 AD 180 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಯಿತು.
ಕಲ್ಕಿಯಿಂದ ಮುಂದುವರಿದ ಯಶಸ್ಸು : ಇತ್ತೀಚೆಗೆ ಬಿಡುಗಡೆಯಾದ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಸಿನಿಮಾ, ದೊಡ್ಡ ಮಟ್ಟದ ಯಶಸ್ಸು ಕಂಡ ಸಿನಿಮಾ. ವಿಶ್ವಾದ್ಯಂತ 1100 ಕೋಟಿಗಳನ್ನು ಗಳಿಸಿ, ಜಾಗತಿಕ ಸಿನಿಮೀಯ ಐಕಾನ್ ಆಗಿ ಪ್ರಭಾಸ್ ಸ್ಥಾನವನ್ನು ಭದ್ರಪಡಿಸಿದೆ. ಈ ಚಿತ್ರವು ಮೊದಲ ವಾರಾಂತ್ಯದಲ್ಲಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆಯಿತು.
ಜಾಗತಿಕ ಮಟ್ಟದಲ್ಲಿಯೂ ಮಿಂಚು : ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಇವೆ. ಬಾಹುಬಲಿ 2 : ದಿ ಕನ್‌ಕ್ಲೂಷನ್ ಸಿನಿಮಾ ವಿದೇಶದಲ್ಲಿ 396.5 ಕೋಟಿ ಕಲೆಕ್ಷನ್ ಮಾಡಿದ್ದರೆ, ಕಲ್ಕಿ ಅಂತರಾಷ್ಟ್ರೀಯ ಮಟ್ಟದಲ್ಲಿ 275.4 ಕೋಟಿ ಗಳಿಸಿದೆ. ಸಲಾರ್ : ಭಾಗ 1 -ಸೀಸ್ ಫೈರ್ 137.8 ಕೋಟಿ ಕಲೆಕ್ಷನ್ ಮಾಡಿದೆ. ಅದೇ ರೀತಿ ಸಾಹೋ ಸಿನಿಮಾ 78.5 ಕೋಟಿಗಳನ್ನು ಗಳಿಸಿತು. ಈ ಮೂಲಕ ಗಡಿ ಮೀರಿ ಮುಂದಡಿ ಇರಿಸಿದ್ದಾರೆ ಪ್ರಭಾಸ್.
ಪ್ರಭಾಸ್ ಮುಂಬರುವ ಸಿನಿಮಾಗಳು ಮತ್ತು ಬಜೆಟ್
ಸಲಾರ್ 2 : ಶೌರ್ಯಂಗ ಪರ್ವಂ” ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಲಿರುವ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಇದ್ದಾರೆ. ಈ ಸಿನಿಮಾದ ಒಟ್ಟಾರೆ ಬಜೆಟ್ 360 ಕೋಟಿ.
ದಿ ರಾಜಾಸಾಬ್ : ಸದ್ಯ ಪ್ರಭಾಸ್ ಮಾರುತಿ ನಿರ್ದೇಶನದ “ದಿ ರಾಜಾಸಾಬ್” ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದರೆ, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಸ್ಪಿರಿಟ್: ಸ್ಪಿರಿಟ್ ಹಿಂದಿ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಏಕೆಂದರೆ ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸಹ ಬಹು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ.
ಕಲ್ಕಿ 2: ಕಲ್ಕಿ 2898 AD ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ನಟಿಸಿರುವ ಈ ಸಿನಿಮಾ ಫೆಬ್ರವರಿ 2025ರಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಪ್ಲಾನ್‌ನಲ್ಲಿದೆ. ಎರಡನೇ ಭಾಗದ ಸಿನಿಮಾದ ಬಜೆಟ್ ಸಹ ಅಷ್ಟೇ ದೊಡ್ಡದಾಗಿದೆ. 700 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
ಹನು ರಾಘವಪುಡಿ ಪ್ರಾಜೆಕ್ಟ್: 1940 ರ ದಶಕದ ಐತಿಹಾಸಿಕ ಕಾಲ್ಪನಿಕ ಕಥೆಯಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ. ಹನು ರಾಘವ್ ಪುಡಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜಿಸಿದ್ದು, ಈ ಚಿತ್ರಕ್ಕೆ ಸುದೀಪ್ ಚಟರ್ಜಿ ಅವರ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ. ಈ ಮೂಲಕ ಪ್ರಭಾಸ್ ಅವರ ಅಪ್‌ಕಮಿಂಗ್ 5 ಸಿನಿಮಾಗಳ ಬಜೆಟ್ ಲೆಕ್ಕಹಾಕಿದರೆ ಅಂದಾಜು 2100 ಕೋಟಿ ರೂಪಾಯಿ ದಾಟುತ್ತದೆ.