ಇರಾನ್ : ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಹಲವೆಡೆ ಮಂಗಳವಾರ ಸಾವಿರಾರು ಪೇಜರ್ಗಳ ಸರಣಿ ಸ್ಫೋಟದಿಂದ 15ಕ್ಕೂ ಹೆಚ್ಚು ಮಂದಿ ಮೃತಪಟ್ಟು, 3000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಮುಖಂಡರಾದ ಅಲಿ ಅಮ್ಮಾರ್ ಮತ್ತು ಹಸನ್ ಫಲ್‌ಲಲ್ಲಾ ಅವರ ಪುತ್ರರೂ ಮೃತಪಟ್ಟವರಲ್ಲಿ ಸೇರಿದ್ದಾರೆ. ಲೆಬನಾನ್‌ನಲ್ಲಿರುವ ಇರಾನ್‌ನ ರಾಯಭಾರಿ ಮಜ್ತಾಬಗೂ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡವರ ಪೈಕಿ 200 ಜನರ ಸ್ಥಿತಿ ಗಂಭೀರವಾಗಿದೆ ಎಂದು ಲೆಬನಾನ್ ಆರೋಗ್ಯ ಸಚಿವ ಫಿರಾಸ್ ಅಬಿಯದ್ ಹೇಳಿದ್ದಾರೆ. ಲೆಬನಾನ್‌ನ ಬೆಕಾ ಕಣಿವೆ ಪ್ರದೇಶದಲ್ಲಿ ಹಿಜ್ಬುಲ್ಲಾ ಸಂಘಟನೆಯ ಸದಸ್ಯನ ಪೇಜರ್ ಸ್ಫೋಟಗೊಂಡಾಗ ಆತನ 10 ವರ್ಷದ ಮಗಳು ಮೃತಪಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಕಾಲಮಾನ ಮಂಗಳವಾರ ಮಧ್ಯಾಹ್ನ 3.45ರ ವೇಳೆಗೆ ಆರಂಭಿಕ ಸ್ಫೋಟ ಸಂಭವಿಸಿದೆ. ಆ ಬಳಿಕದ ಒಂದು ಗಂಟೆ ನಿರಂತರ ಸ್ಫೋಟಗಳು ಸಂಭವಿಸಿವೆ. ಈ ಕೃತ್ಯದ ಹಿಂದೆ ಇಸ್ರೇಲ್ ಕೈವಾಡ ಇದೆ. ಅತ್ಯಾಧುನಿಕ ರಿಮೋಟ್ ತಂತ್ರಜ್ಞಾನ ಬಳಸಿ, ಪೇಜರ್ಗಳ ಸ್ಫೋಟ ನಡೆಸಲಾಗಿದೆ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಲು ಇಸ್ರೇಲ್ ಸೇನೆ ನಿರಾಕರಿಸಿದೆ. ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಅವರು, ‘ಇಸ್ರೇಲ್ ನಡೆಸಿದ ಈ ಕ್ರಿಮಿನಲ್ ಆಕ್ರಮಣವು, ಲೆಬನಾನ್‌ನ ಸಾರ್ವಭೌಮತೆಯ ಉಲ್ಲಂಘನೆ’ ಎಂದು ಟೀಕಿಸಿದ್ದಾರೆ. ಸದ್ಯ ಪೇಜರ್ ಸ್ಫೋಟದಿಂದ ಇರಾನ್ನಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿರಿಯಾದಲ್ಲಿ 14 ಮಂದಿಗೆ ಗಾಯ : ಡಮಾಸ್ಕಸ್ ಮತ್ತು ದೇಶದ ಇತರ ಕೆಲವೆಡೆ ಮಂಗಳವಾರ ಪೇಜರ್ ಸ್ಪೋಟದಿಂದ 14 ಮಂದಿ ಗಾಯಗೊಂಡಿದ್ಧಾರೆ ಎಂದು ಸಿರಿಯಾದಲ್ಲಿರುವ ಮಾನವ ಹಕ್ಕುಗಳ ವೀಕ್ಷಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್ – BMTC ಬಸ್ಸನ್ನೇ ಅಡ್ಡಗಟ್ಟಿ ಹುಚ್ಚಾಟ ಮೆರೆದ ಭೂಪ..!