ಬೆಂಗಳೂರು : ಚುನಾವಣೆಯ ಹೊತ್ತಿನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಹೇಳಿಕೆ ಎನ್ನಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈಗ ಈ ಪೋಸ್ಟರ್ಗೂ ನಿರ್ಮಲಾನಂದನಾಥ ಶ್ರೀಗಳಿಗೂ, ಮಠಕ್ಕೂ ಯಾವುದೇ ಸಂಬಂಧವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆತ್ಮೀಯ ಕುಲ ಬಾಂಧವರೇ,” ಈಗಾಗಲೇ ನಮ್ಮ ಜನಾಂಗದ ನಾಯಕರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿದ್ದಾರೆ. ನಮ್ಮ ಜನಾಂಗದ ಮತ್ತೊಬ್ಬ ನಾಯಕರಾದ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದೆ. ಹಾಗಾಗಿ ಚನ್ನಪಟ್ಟಣದಲ್ಲಿ ಶ್ರೀ ಸಿ.ಪಿ.ಯೋಗೇಶ್ವರ ಅವರನ್ನು ಗೆಲ್ಲಿಸುವ ಮುಖಾಂತರ ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿಯನ್ನು ತುಂಬೋಣ. ಒಗ್ಗಟ್ಟನ್ನು ಮೆರೆಯೋಣ. ಶ್ರೀ ನಿರ್ಮಲಾನಂದನಾಥ ಶ್ರೀಗಳು ಪೀಠಾಧ್ಯಕ್ಷರು, ಆದಿಚುಂಚನಗಿರಿ ಸಂಸ್ಥಾನ ಮಹಾಮಠ ಎಂಬ ಪೋಸ್ಟ್ ವೈರಲ್ ಆಗಿದೆ.
ಇದೀಗ ಈ ಪೋಸ್ಟರ್ ಬಗ್ಗೆ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ. “ಚುನಾವಣೆಯ ಹೊತ್ತಿನಲ್ಲಿ ಪ್ರಚಾರವಾಗುತ್ತಿರುವ ಸ್ವಾಮೀಜಿಯವರ ಹೇಳಿಕೆ ಎನ್ನಲಾಗಿರುವ ಪೋಸ್ಟರ್ಗೂ ಶ್ರೀ ಮಠಕ್ಕೂ ಯಾವ ಸಂಬಂಧವೂ ಇಲ್ಲ. ಶ್ರೀ ಮಠ ಯಾವಾಗಲೂ ರಾಜಕಾರಣದ ವಿಚಾರಗಳಿಂದ ದೂರವಿರುವುದು ಸರ್ವ ವಿಧಿತ. ಆದ್ದರಿಂದ ಸೂಕ್ಷ್ಮವಾದ ಇಂತಹ ವಿಚಾರಗಳನ್ನು ಯಾರೂ ಅನಾವಶ್ಯಕವಾಗಿ ನಾಗರಿಕ ಸಮಾಜದಲ್ಲಿ ಬಿತ್ತರಿಸಿ ಗೊಂದಲ ಉಂಟುಮಾಡಬಾರದು” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ನಕಾರ..!