ಗೋಪಾಲ್ ಹಳೇಪಾಳ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ‘ನೈಸ್ ರೋಡ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.ಕಳೆದ ಜನ್ಮದಲ್ಲಿ ಮಾಡಿದ ತಪ್ಪಗೆ ಈ ಜನ್ಮದಲ್ಲಿ ಶಿಕ್ಷೆ ಕೊಡುವುದು ಯಾವ ನ್ಯಾಯ ಎನ್ನುವ ಅಂಶವನ್ನಿಟ್ಟುಕೊಂಡು ಕರ್ಮ ಮತ್ತು ಧರ್ಮದ ಮೇಲೆ ‘ನೈಸ್ ರೋಡ್’ ಚಿತ್ರದ ಕಥೆ ಹೆಣೆಯಲಾಗಿದೆ. ನಿರ್ದೇಶನದ ಜೊತೆಗೆ ಪುನರ್ ಗೀತಾ ಸಿನಿಮಾಸ್ ಬ್ಯಾನರ್ ಅಡಿ ಗೋಪಾಲ್ ಹಳೇಪಾಳ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಿರ್ದೇಶಕ ಗೋಪಾಲ್ ಅವರು, ಈ ಹಿಂದೆ ನಾನು ತಾಂಡವ ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ. ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರ. ಈ ಕಥೆ ಬರೆಯುವಾಗಲೇ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರಕ್ಕೆ ಧರ್ಮ ಅವರನ್ನು ಆಯ್ಕೆ ಮಾಡಿಕೊಂಡಿದ್ದೆ, ಮತ್ತೊಂದು ಮುಖ್ಯ ಪಾತ್ರದಲ್ಲಿ ಜೋತಿ ರೈ ಕಾಣಿಸಿಕೊಂಡಿದ್ದಾರೆ. ಗೋವಿಂದೇಗೌಡ, ಮಂಜುನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು, ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ ಪ್ಲ್ಯಾನ್ ಇದೆ, ನೈಸ್ ರೋಡ್ಗೂ ನಮ್ಮ ಸಿನಿಮಾಗೂ ಸಂಬಂಧವಿಲ್ಲ. ಹಳ್ಳಿಯ ಮುಂದೆ ಹೈವೇ ರಸ್ತೆಯಿರುತ್ತದೆ. ಆ ರಸ್ತೆ ಎಷ್ಟು ನೈಸಾಗಿದೆ ಅಂತ ಊರ ಜನ ಹೇಳ್ತಿರ್ತಾರೆ. ಅದನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದೇವೆ ಎಂದು ಹೇಳಿದರು.
ನಟ ಧರ್ಮ ಮಾತನಾಡುತ್ತ, ಈವರೆಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದೇನೆ. ಇಲ್ಲೂ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಇದರಲ್ಲಿ ಕಥೆಯೇ ಹೀರೋ. ಕರ್ಮದ ಬಗ್ಗೆ ಕಥೆ ಹೇಳಲಾಗಿದ್ದು, ಡಿಫರೆಂಟ್ ಆಗಿ ಬಂದಿದೆ. ಗೋಪಾಲ್ ನೀವೇ ಬೇಕು ಅಂತ ಬಂದಿದ್ದರು ಎಂದು ಹೇಳಿದರು.
ರಾಜುಗೌಡ ಮಾತನಾಡಿ, ಈ ಕಾನ್ಸೆಪ್ಟ್ ಕೇಳಿದಾಗ ತುಂಬಾ ಇಷ್ಟ ಆಯ್ತು. ಕ್ಯಾರೆಕ್ಟರ್ಗಳಲ್ಲಿ ನಮ್ಮ ಸುತ್ತಲಿನ ಅನೇಕ ಪಾತ್ರಗಳು ಸಿಗುತ್ತವೆ, ಇದು ಬದುಕಿನ ಆಯಾಮ ಕಟ್ಟಿಕೊಡುವ ಚಿತ್ರ. ಈ ಬಳಗದ ಜೊತೆ ನಾನು ನಿಂತದ್ದು ಖುಷಿಯಿದೆ ಎಂದರು.
ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡುತ್ತ ಪ್ರಾರಂಭದಲ್ಲಿ ಹಾಡುಗಳು ಇರಲಿಲ್ಲ. ಆರ್.ಆರ್. ತುಂಬಾ ಚಾಲೆಂಜಿಂಗ್ ಆಗಿತ್ತು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇರುವ ಚಿತ್ರ. ಮನುಷ್ಯ ಜೀವನದಲ್ಲಿ ನಡೆವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎಂದರು. ಉಳಿದಂತೆ ಛಾಯಾಗ್ರಾಹಕ ಪ್ರವೀಣ್ ಶೆಟ್ಟಿ, ಕಲಾವಿದರಾದ ಮಂಜು ರಂಗಾಯಣ, ಗೋವಿಂದೇ ಗೌಡ, ರವಿಕಿಶೋರ್, ಸಚ್ಚಿ, ಸುರೇಖ, ಮಂಜು ಕ್ರಿಶ್, ಪ್ರಭು ರಾಜ್ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ : ಸೈಡ್ ಬಿ ಟ್ರೈಲರ್ನಲ್ಲೂ ಸೆಸ್ಸೇಷನ್ ಕ್ರಿಯೇಟ್ ಮಾಡಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ..!