ಮೋದಿ ಸರ್ಕಾರ ದೇಶದ ಅನ್ನದಾತರಿಗೆ ವರ್ಷದ ಮೊದಲ ದಿನವೇ ಗುಡ್ ನ್ಯೂಸ್ ನೀಡಿದೆ. ಹೌದು.. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ರೂ.69,515.71 ಕೋಟಿ ರೂ.ಗಳ ಒಟ್ಟಾರೆ ವೆಚ್ಚದೊಂದಿಗೆ 2025-26 ರವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದಿಸಿದೆ
ವರ್ಷದ ಮೊದಲ ಸಚಿವ ಸಂಪುಟ ಸಭೆಯನ್ನು ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಸಮರ್ಪಿಸಿ ಕೇವಲ ರೈತರಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬಜೆಟ್ 69,515 ಕೋಟಿ ರೂ.ಗೆ ಹೆಚ್ಚಳ ಮಾಡಿದ್ದು, ಇದರ ಜೊತೆ ಡಿಎಪಿ ರಸಗೊಬ್ಬರಕ್ಕೆ 3,850 ಕೋಟಿ ರೂ. ವಿಶೇಷ ಪ್ಯಾಕೇಜ್ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ.
ಈ ನಿರ್ಧಾರದಿಂದ ರೈತರು 50 ಕೆಜಿ ತೂಕದ ಡಿಎಪಿ ರಸಗೊಬ್ಬರವನ್ನು 1,350 ರೂ. ಚಿಲ್ಲರೆ ದರದಲ್ಲಿ ಖರೀದಿಸಬಹುದು. ಈ ಸಬ್ಸಿಡಿ ಜನವರಿ 1ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ. ಕಳೆದ ವರ್ಷ ಸರ್ಕಾರವು ಏಪ್ರಿಲ್ 1 ರಿಂದ ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ ಒಂದು ಟನ್‌ಗೆ 3,500 ರೂ. ವಿಶೇಷ ಸಬ್ಸಿಡಿಗೆ ಅನುಮತಿ ನೀಡಿತ್ತು. ಈ ಅವಧಿಯಲ್ಲಿ ಏರುತ್ತಿರುವ ವೆಚ್ಚ ಸರಿದೂಗಿಸಲು 2,625 ಕೋಟಿ ರೂ. ಪ್ಯಾಕೇಜ್ ಘೋಷಿಸಿತ್ತು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ರೈತರು 1,350 ರೂ.ಗೆ 50 ಕೆಜಿ ಡಿಎಪಿ ರಸಗೊಬ್ಬರ ಖರೀದಿ ಮಾಡುವುದನ್ನು ಮುಂದುವರಿಸಬಹುದು. ಬೇರೆ ದೇಶಗಳಲ್ಲಿ 50 ಕೆಜಿ ರಸಗೊಬ್ಬರಕ್ಕೆ 3 ಸಾವಿರ ರೂ.ಗೂ ಅಧಿಕ ವೆಚ್ಚವಾಗುತ್ತದೆ. 2014-24 ಅವಧಿಯಲ್ಲಿ ರೈತರಿಗಾಗಿ 11.9 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. 2004-14ರ ಅವಧಿಗೆ ಹೋಲಿಸಿದರೆ ಸಬ್ಸಿಡಿ ಪ್ರಮಾಣ ದುಪ್ಪಟ್ಟಾಗಿದೆ ಎಂದು ತಿಳಿಸಿದರು.
2024 ರಿಂದ ಕೋವಿಡ್ ಮತ್ತು ಯುದ್ಧ ಸಂಬಂಧಿತ ಅಡೆತಡೆಗಳಿಂದ ಉಂಟಾದ ಮಾರುಕಟ್ಟೆ ಏರಿಳಿತಗಳ ಭಾರವನ್ನು ರೈತರು ಭರಿಸಬೇಕಾಗಿಲ್ಲ. ಜಾಗತಿಕ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಬೆಲೆ ಏಕಾಏಕಿ ಬದಲಾವಣೆಯಾಗುತ್ತಿದೆ. ಈ ಕಾರಣಕ್ಕೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಯಾವ ಅವಧಿಯಲ್ಲಿ ರಸಗೊಬ್ಬರಕ್ಕೆ ಎಷ್ಟು ಕೋಟಿ ಸಬ್ಸಿಡಿ?
2004 ರಿಂದ 2014 – 5.5 ಲಕ್ಷ ಕೋಟಿ ರೂ.
2014 ರಿಂದ 2024 – 11.9 ಲಕ್ಷ ಕೋಟಿ ರೂ.
ಇದನ್ನೂ ಓದಿ : ಪ್ರಧಾನಿ ಮೋದಿಯನ್ನು ಭೇಟಿಯಾದ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ – ಫೋಟೋಸ್ ವೈರಲ್..!