ಬೆಂಗಳೂರು : ಹೊಸ ವರ್ಷದ ಹೊತ್ತಲ್ಲೇ ಬ್ರಾಹ್ಮಣರಿಗೆ ಕಾಂಗ್ರೆಸ್ ಸರ್ಕಾರ ಖುಷಿ ಸುದ್ದಿ ಕೊಟ್ಟಿದೆ. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಾಂದೀಪನಿ ಶಿಷ್ಯ ವೇತನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಯೋಜನೆಯಡಿ 2023-2024ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸುಮಾರು 5.85 ಕೋಟಿ ಶಿಷ್ಯ ವೇತನವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಬ್ರಾಹ್ಮಣ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸಾಂದೀಪನಿ ಶಿಷ್ಯ ವೇತನ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.
ಏನಿದು ಸಾಂದೀಪನಿ ಶಿಷ್ಯ ವೇತನ ?
ಈ ಯೋಜನೆಯಡಿ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು 15 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ವರ್ಷ ಒಟ್ಟು 9,206 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಈ ವರ್ಷ ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸರ್ಕಾರ ಸುಮಾರು 13.77 ಕೋಟಿ ರೂ. ಮೀಸಲಿಟ್ಟಿದೆ ಎಂಬ ಮಾಹಿತಿ ಇದೆ. ಯುಜಿ/ಪಿಜಿ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ತೇರ್ಗಡೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ದಾಖಲಾತಿ ಶುಲ್ಕದ ಮೊತ್ತದ 2/3 ಭಾಗ ಹಾಗೂ ಗರಿಷ್ಠ ರೂ. 1 ಲಕ್ಷದ ವರೆಗೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ಸರ್ಕಾರ ಪಾವತಿಸಲಿದೆ.
ಇದನ್ನೂ ಓದಿ : ಮನು ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಪ್ರತಿಷ್ಠಿತ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ..!