ಮುಂಬೈ : ಮಹಾರಾಷ್ಟ್ರದ ಎನ್ಸಿಪಿ ಹಿರಿಯ ನಾಯಕ ಬಾಬಾ ಸಿದ್ದಿಕಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವಂತಹ ಘಟನೆ ಮುಂಬೈನ ಬಾಂದ್ರಾ ಪಶ್ಚಿಮ ಭಾಗದಲ್ಲಿ ನಡೆದಿದೆ. ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಬಾಬಾ ಸಿದ್ದಿಕಿ ಎದೆ, ಹೊಟ್ಟೆ ಭಾಗಕ್ಕೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸಿದ್ದಿಕಿರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲೀಲಾವತಿ ಆಸ್ಪತ್ರೆಯಲ್ಲಿ ಅವರು ಕೊನೆಯುರಿಸೆಳೆದಿದ್ದಾರೆ.
ಬಾಬಾ ಸಿದ್ದಿಕಿ ನಿನ್ನೆ ರಾತ್ರಿ 9.15 ರ ಸುಮಾರಿಗೆ ನಿರ್ಮಲ್ ನಗರ ಪ್ರದೇಶದಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಬಾಬಾ ಸಿದ್ದಿಕಿ ಪುತ್ರನ ಕಚೇರಿ ಸಮೀಪದ ರಾಮಮಂದಿರ ಬಳಿಯೇ ಕೃತ್ಯವೆಸಗಲಾಗಿದೆ. ಬಾಬಾ ಸಿದ್ದಿಕಿ ಮೇಲೆ ಎರಡು ಮೂರು ಸುತ್ತು ಗುಂಡು ಹಾರಿಸಲಾಗಿದೆ. ಅದರಲ್ಲಿ ಒಂದು ಗುಂಡು ಅವರ ಎದೆಗೆ ತಗುಲಿತು. ಸದ್ಯ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 9.9 MM ಪಿಸ್ತೂಲ್ನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಬಾ ಸಿದ್ದಿಕಿ ಅವರು ಡಿಸಿಎಂ ಅಜಿತ್ ಪವಾರ್ ಬಣದ ಮಾಜಿ ಶಾಸಕರಾಗಿದ್ದರು. ಬಾಂದ್ರಾದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ಧಿಕಿ, 48 ವರ್ಷ ಕಾಂಗ್ರೆಸ್ನಲ್ಲಿದ್ದು, ಫೆಬ್ರವರಿಯಲ್ಲಿ NCP ಸೇರಿದ್ದರು. 1999, 2004, 2009ರಲ್ಲಿ ಬಾಂದ್ರಾ ಕ್ಷೇತ್ರದಿಂದ ಶಾಸಕರಾಗಿದ್ದರು. ಆಹಾರ ಮತ್ತು ನಾಗರಿಕ, ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದರು. ಇದೀಗ ಮಹಾರಾಷ್ಟ್ರ ಎಲೆಕ್ಷನ್ಗೂ ಮುನ್ನವೇ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದು ಬಾರೀ ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯ ದುರುದ್ದೇಶಕ್ಕೆ ಸಿದ್ಧಿಕಿ ಕೊಲೆ ಆಯ್ತಾ? ಎಂಬ ಪ್ರಶ್ನೆಗಳು ಎದ್ದಿದೆ. ದಸರಾ ಹಬ್ಬದ ದಿನವೇ NCP ನಾಯಕ ದುರಂತ ಅಂತ್ಯ ಕಂಡಿದ್ದು, ಸಿದ್ಧಿಕಿ ಹತ್ಯೆ ಬಗ್ಗೆ ಸಿಎಂ ಏಕನಾಥ್ ಶಿಂಧೆ ತನಿಖೆಗೆ ಆದೇಶಿದ್ದಾರೆ.
ಇನ್ನು ಬಾಬಾ ಸಿದ್ದಿಕಿ ರಾಜಕಾರಣಿ ಮಾತ್ರವಲ್ಲದೆ ಅವರ ಹೆಸರು ಬಾಲಿವುಡ್‌ನಲ್ಲೂ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಇವರು ಆಯೋಜಿಸುವ ಇಫ್ತಾರ್ ಕೂಟ ಮನೆಮಾತಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರವಲ್ಲದೆ ಅನೇಕ ಕಿರುತೆರೆ ತಾರೆಯರು ಕೂಡ ಈ ಪಾರ್ಟಿಯಲ್ಲಿ ಭಾಗವಹಿಸುತ್ತಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಕೂಡ ಸಿದ್ದಿಕಿ ಅವರ ಪಾರ್ಟಿಗೆ ತಪ್ಪದೇ ಬರುತ್ತಿದ್ದರು. ಸಲ್ಮಾನ್ ಖಾನ್ ಬಾಬಾ ಸಿದ್ದಿಕಿ ಜೊತೆ ನಿಕಟ ಸಂಬಂಧ ಹೊಂದಿದ್ದರು. ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಮಧ್ಯೆ ಏನೇ ಸಮಸ್ಯೆಗಳಾದರೂ ಅದನ್ನು ನಯವಾಗಿ ಬಾಬಾ ಸಿದ್ಧಿಕಿ ಬಗೆ ಹರಿಸುತ್ತಿದ್ದರು. ಇದಕ್ಕೊಂದು ಉದಾಹರಣೆ ಅಂದರೆ, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಕೋಲ್ಡ್ ವಾರ್ ಪ್ರತ್ಯಕ್ಷ ಉದಾಹರಣೆ.
ಇದನ್ನೂ ಓದಿ : ದೊಡ್ಮನೆ ಸ್ಪರ್ಧಿಗಳಿಗೆ ಸರ್‌ಪ್ರೈಸ್ ಗಿಫ್ಟ್ ಕೊಟ್ಟ ಬಿಗ್ ಬಾಸ್.. ಏನದು?