ಬೆಂಗಳೂರು: ‘ಬಂದೂಕಿನ ಮೂಲಕ ನ್ಯಾಯ’ ಪಡೆಯಲು ಪಶ್ಚಿಮ ಘಟ್ಟದಲ್ಲಿ ದಶಕಗಳ ಕಾಲ ಹೋರಾಟ ನಡೆಸಿದ್ದ 6 ನಕ್ಸಲರು ಶಸ್ತ್ರತ್ಯಾಗ ಮಾಡಿದ್ದಾರೆ. ಮುಖ್ಯವಾಹಿನಿಗೆ ಬರಲು ನಿರ್ಧರಿಸಿ ನಿನ್ನೆ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಶರಣಾಗಿದ್ದಾರೆ.
ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ್, ಜಿಶಾ ಶರಣಾಗಿದ್ದು, ಸಿಎಂ ಎಲ್ಲರಿಗೂ ಸಂವಿಧಾನ ಪುಸ್ತಕ ನೀಡಿದ್ದಾರೆ. ಈ ವೇಳೆ ನಕ್ಸಲರು ಹಲವು ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಸಿಎಂಗೆ ನೀಡಿದ್ದಾರೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಸಂಪುಟದಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಮುಂದಿನ ಪ್ರಕ್ರಿಯೆ ಏನು? : ಶರಣಾಗತರಾದ ನಕ್ಸಲರ ವಿರುದ್ಧ ಇರುವ ಘೋರ ಅಪರಾಧಗಳ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಂದುವರಿಯುತ್ತವೆ. ರಾಜ್ಯ ಸರ್ಕಾರವು ಸರಿಯಾದ ಕಾರ್ಯ ವಿಧಾನಗಳ ಮೂಲಕ ಶರಣಾದ ನಕ್ಸಲರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯಲು ಪರಿಗಣಿಸಬಹುದು. ಶರಣಾದ ನಕ್ಸಲರಿಗೆ ಉಚಿತ ಕಾನೂನು ಸಹಕಾರ ನೀಡಲು ವಕೀಲರನ್ನು ಒದಗಿಸಬಹುದು. ಅಲ್ಲದೆ ತ್ವರಿತ ವಿಚಾರಣೆಗಾಗಿ ತ್ವರಿತಗತಿ ನ್ಯಾಯಾಲಯ ರಚನೆ ಮಾಡಲು ಸರ್ಕಾರಕ್ಕೆ ಅವಕಾಶ ಇದೆ.
ಈ ಮಾಹಿತಿಯನ್ನು ನೀಡಬೇಕಿದೆ :
-
- ನಕ್ಸಲ್ ಶರಣಾಗತಿ ನಿಯಮಾವಳಿ ಪ್ರಕಾರ ಶರಣಾಗತರಾದ ನಕ್ಸಲರು ನನ್ನ ನಿಜವಾದ ಹೆಸರು, ಗುರುತು, ಚಟುವಟಿಕೆ, ಕ್ರಿಯಾಶೀಲವಾಗಿದ್ದ ಸಂಘಟನೆಯ ಹೆಸರು, ಶಸ್ತ್ರಾಸ್ತ್ರ ಸರಬರಾಜು ಮೂಲದ ಬಗ್ಗೆ ಮಾಹಿತಿ ನೀಡಬೇಕು.
- ಅಲ್ಲದೆ ಸಂಘಟನೆಗೆ ಹಣಕಾಸು ನೆರವು ಒದಗಿಸುವವರ ಬಗ್ಗೆ ಮತ್ತು ಕೊರಿಯರ್ ಗಳ ಮೂಲದ ಬಗ್ಗೆ ಮಾಹಿತಿ ಕೊಡಬೇಕು.
- ಹಿಂದೆ ಎಸಗಿದ್ದ ಕ್ರಿಮಿನಲ್ ಅಪರಾಧಗಳ ಮಾಹಿತಿ, ಭಾಗಿಯಾದವರ ವಿವರ, ಯೋಜಿಸದವರ ವಿವರ, ಬಳಸಿದ ಆಯುಧಗಳ ಮಾಹಿತಿಯನ್ನು ನೀಡಬೇಕಿದೆ.
- ಅಷ್ಟೇ ಅಲ್ಲದೆ, ಮಾಧ್ಯಮಗಳ ಮುಂದೆ ತಾನಾಗಿಯೇ ಸ್ವ ಇಚ್ಛೆಯಿಂದ ಶರಣಾಗುತ್ತಿದ್ದೇನೆ ಎಂದು ಹೇಳಿಕೆ ನೀಡಬೇಕಿದೆ.
ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಭಾರೀ ದುರಂತ – ಕಾಲ್ತುಳಿತಕ್ಕೆ 7 ಭಕ್ತರು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ!