ಬೆಂಗಳೂರು : ಮೈಸೂರು ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಈ ಸಂಬಂಧ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಇದೀಗ ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗಕ್ಕೆ ಸಿಎಂ ಆದೇಶ ನೀಡಿದ್ದಾರೆ.
ಚಿನ್ನದ ರಥ ನಿರ್ಮಿಸುವ ವೆಚ್ಚವನ್ನು ಸರ್ಕಾರ ಪಾಲು ನೀಡಬೇಕು ಮತ್ತು ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು. ದೇವಸ್ಥಾನದಲ್ಲಿ ಈ ಉದ್ದೇಶಕ್ಕೋಸ್ಕರ ಪ್ರತ್ಯೇಕ ಹುಂಡಿಯೊಂದನ್ನು ಇಡಬೇಕು. ಭಕ್ತರು ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ದಿನೇಶ್ ಗೂಳಿಗೌಡ ಸಿಎಂಗೆ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶ ನೀಡಿದ್ದಾರೆ. ಹೊಸ ಚಿನ್ನದ ರಥ ನಿರ್ಮಿಸಿ ಚಾಮುಂಡಿ ದೇವಿಯ ರಥೋತ್ಸವ ಮಾಡಬೇಕು, ದೇವಿಗೆ ಹೊಸ ಚಿನ್ನದ ರಥ ನಿರ್ಮಿಸುವ ಪ್ರಸ್ತಾವ ಈ ಹಿಂದೆಯೇ ಬಂದಿತ್ತು. ಸುಮಾರು 100 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು, ಮುಂದಿನ ದಸರಾದ ಒಳಗಡೆ ರಥ ನಿರ್ಮಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹೊಳೆನರಸೀಪುರದಲ್ಲಿ ಶ್ರೇಯಸ್ ಬಂದ ಮೇಲೆ ಮಾನವೀಯತೆ ಮರಳಿ ಸಿಕ್ಕಿದೆ – ಪ್ರೀತಂ ಗೌಡ..!