ಮೈಸೂರು : ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 14 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ, ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಪರ ಮತ ಭೇಟೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಭರ್ಜರಿ ಪ್ರಚಾರ ಮಾಡಲು ರಾಜ್ಯಕ್ಕೆ ಎಂಟ್ರಿ ಕೊಡುವ ಮುನ್ನವೇ ಸಿಎಂ ಸಿದ್ದು ಬಿಗ್ ಆಪರೇಷನ್ ನಡೆಸಿದ್ದಾರೆ.
ಬಿಜೆಪಿಯ ದೊಡ್ಡ ಲೀಡರ್ಗೆ ಗಾಳ ಹಾಕಿದ ಸಿಎಂ ಸಿದ್ದರಾಮಯ್ಯ, 7 ವರ್ಷದ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ಮನೆಗೆ ದಿಢೀರ್ ಎಂಟ್ರಿ ಕೊಟ್ಟ ಸಿಎಂ ಸಿದ್ದು, ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲಲು ಸ್ವಯಂ ಪ್ರತಿಷ್ಠೆ ಬದಿಗಿಟ್ಟು ಕಾದು ಕುಳಿತು ಶ್ರೀನಿವಾಸ್ ಪ್ರಸಾದ್ ಅವರನ್ನು ಮೀಟ್ ಆಗಿದ್ದಾರೆ. ಹಮ್ಮು-ಬಿಮ್ಮು ಎಲ್ಲವನ್ನೂ ಬಿಟ್ಟು ಬರೋಬ್ಬರಿ 8 ನಿಮಿಷಗಳ ಕಾಲ ಚರ್ಚೆ ನಡೆಸಿ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲಿ ಎಂದು ಮುಕ್ತವಾಗಿ ಮಾತುಕತೆ ನಡೆಸಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು ಭಾಗದಲ್ಲಿ ಬಲಗೈ ಸಮುದಾಯದ ಅತ್ಯಂತ ಪ್ರಭಾವಿ ನಾಯಕ. ಈ ಭಾಗದಲ್ಲಿ ಬಲಗೈ ಸಮುದಾಯದ ಸುಮಾರು 8 ಲಕ್ಷ ಮತಗಳಿವೆ.
ಹೀಗಾಗಿ, ಸಿಎಂ ಸಿದ್ದು ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿ ಮತ ಸೆಳೆಯೋ ಪ್ಲಾನ್ ಹೂಡಿದ್ದಾರೆ. ಕಳೆದ ಬಾರಿ ಚಾಮರಾಜನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಪ್ರಸಾದ್ ಅವರು ಇದೀಗ ರಾಜಕೀಯ ನಿವೃತ್ತಿ ಪಡೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ತಮ್ಮ ಆಪ್ತರನ್ನು ಪ್ರಸಾದ್ ನಿವಾಸಕ್ಕೆ ಕಳಿಸಿದ್ದರು. ಡಾ.ಯತೀಂದ್ರ, ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಕೂಡ ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿಯಲ್ಲಿ ಪಳಗಿರುವ ಶ್ರೀನಿವಾಸಪ್ರಸಾದ್ ಚಾಮರಾಜನಗರ, ಮೈಸೂರು ಮಾತ್ರವಲ್ಲದೇ ಬೇರೆಡೆಯೂ ಪ್ರಭಾವ ಇರುವ ಕಾರಣ ಶ್ರೀನಿವಾಸ್ ಪ್ರಸಾದ್ ಅವರನ್ನು ಸೆಳೆದು ಪರಿಶಿಷ್ಟ ಮತಗಳನ್ನು ಪಡೆಯಲು ಸಿಎಂ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಶ್ರೀನಿವಾಸ ಪ್ರಸಾದ್ ಭೇಟಿ ನಂತರ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಶ್ರೀನಿವಾಸ ಪ್ರಸಾದ್ ರಾಜ್ಯದ ಹಿರಿಯ ರಾಜಕಾರಣಿ. ಅವರು ಇತ್ತೀಚೆಗೆ ರಾಜಕೀಯ ನಿವೃತ್ತಿ ಪಡೆದಿದ್ದರು. ಅವರಿಗೆ ಆರೋಗ್ಯದಲ್ಲೂ ಕೊಂಚ ವ್ಯತ್ಯಾಸ ಆಗಿತ್ತು. ರಾಜಕೀಯ ನಿವೃತ್ತಿ ಪಡೆದ ಮೇಲೆ ಅವರನ್ನು ಭೇಟಿ ಮಾಡಿರಲಿಲ್ಲ. ಇವತ್ತು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ನಾನೂ ಅವರೂ ತುಂಬಾ ದಿನಗಳ ಸ್ನೇಹಿತರಾಗಿದ್ದೆವು. ಶ್ರೀನಿವಾಸ ಪ್ರಸಾದ್ ಕ್ಷೇಮ ವಿಚಾರಿಸಿಕೊಳ್ಳಲು ಬಂದಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :NIA ಕಸ್ಟಡಿಗೆ ರಾಮೇಶ್ವರಂ ಕೆಫೆ ಬಾಂಬರ್ಸ್ : ಏಪ್ರಿಲ್ 22ರವರೆಗೆ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ಆದೇಶ..!