ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಮತ್ತಿತರರು ಜೈಲು ಸೇರಿದ್ದಾರೆ. ಇದೀಗ ಈ ಕೇಸ್ಗೆ ಸಂಬಂಧಿಸಿದಂತೆ ಕೃತ್ಯದ ವೇಳೆ ಕೊಟ್ಟಿದ್ದ 5 ಲಕ್ಷ ರೂ. ಹಣ ಪತ್ತೆಯಾಗಿದ್ದು, ಆರೋಪಿ ಕೇಶವಮೂರ್ತಿ ಅಣ್ಣನಿಂದ ಪೊಲೀಸರು ಹಣ ಜಪ್ತಿ ಮಾಡಿದ್ದಾರೆ.
ನಟ ದರ್ಶನ್ ಆಂಡ್ ಗ್ಯಾಂಗ್ನಿಂದ ಕೊಲೆಯಾದ ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಮಾಡಲು ಪ್ರತಿಯೊಬ್ಬರಿಗೂ ಐದು ಲಕ್ಷಕ್ಕೆ ಡೀಲ್ ಮಾಡಲಾಗಿತ್ತು. ಹೀಗಾಗಿ ಆರೋಪಿ ಪ್ರದೂಷ್ನಿಂದ ನಿಖಿಲ್ ನಾಯಕ್, ರಾಘವೇಂದ್ರ, ಕೇಶವಮೂರ್ತಿ ಮತ್ತು ಕಾರ್ತಿಕ್ ಹಣ ಪಡೆದು ಮೃತದೇಹ ಸಾಗಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ತೀವ್ರ ತನಿಖೆ ನಡೆಸುತ್ತಿದ್ದ ಹೊತ್ತಲ್ಲೇ ಕೊಲೆ ಕೇಸ್ನಲ್ಲಿ ಕೇಶವಮೂರ್ತಿ ಪೊಲೀಸರ ಮುಂದೆ ಸರೆಂಡರ್ ಆಗಿದ್ದನು. ಸರೆಂಡರ್ಗೂ ಮುನ್ನ ಕೇಶವಮೂರ್ತಿ ಐದು ಲಕ್ಷ ಹಣವನ್ನು ತನ್ನ ಅಣ್ಣ ಜಗದೀಶ್ಗೆ ನೀಡಿದ್ದನು. ಅಲ್ಲದೇ ಕೇಶವಮೂರ್ತಿ ಹಣ ಕೊಟ್ಟ ಬಳಿಕ ಜಗದೀಶ್ ಕೆಲಕಾಲ ಊರು ಬಿಟ್ಟಿದ್ದನು.
ಊರು ಬಿಟ್ಟಿದ್ದ ಜಗದೀಶ್, ಐದು ಲಕ್ಷ ಹಣದಲ್ಲಿ 70 ಸಾವಿರ ರೂ. ಖರ್ಚು ಮಾಡಿದ್ದನು. ಆದರೆ ಪೊಲೀಸರು ತನಿಖೆ ಚುರುಕಾಗುತ್ತಿದ್ದಂತೆ, ಜಗದೀಶ್ ತಾನೇ ಬಂದು ಉಳಿದ 4.3 ಲಕ್ಷ ರೂ. ಹಣವನ್ನು ಪೊಲೀಸರಿಗೆ ನೀಡಿದ್ದಾನೆ. ಇದೀಗ ಆರೋಪಿ ಕೇಶವಮೂರ್ತಿ ಅಣ್ಣನಿಂದ ಹಣ ವಶಕ್ಕೆ ಪಡೆದ ಪೊಲೀಸರು ಪಂಚನಾಮೆ ಮಾಡಿದ್ದಾರೆ.
ಇದನ್ನೂ ಓದಿ : ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ ಎಂದೆಂದೂ ಜೀವಂತ.. ಹೆಮ್ಮೆಯ ಕನ್ನಡತಿಗೆ BMRCLನಿಂದ ಸಂತಾಪ..!