ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. 50:50 ಅನುಪಾತದಡಿ ನಿವೇಶನಗಳನ್ನು ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 50:50 ಅನುಪಾತದಲ್ಲಿ ನಿವೇಶನ ಪಡೆದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನಂತರ ಅವರು ಸೈಟ್ಗಳನ್ನು ಹಿಂದಿರುಗಿಸಿದ್ದರು.
ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ವಿಚಾರಣೆಗೂ ಒಳಪಡಿಸಲಾಗಿತ್ತು. ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಕೂಡ ಹಗರಣದ ತನಿಖೆ ಆರಂಭಿಸಿದೆ. ಇದೀಗ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ದೂರುದಾರ ಸ್ನೇಹಮಯಿ ಕೃಷ್ಣ ಸಾಕ್ಷ್ಯವನ್ನು ರಿಲೀಸ್ ಮಾಡಿದ್ದಾರೆ.
ಪಾರ್ವತಿ ಕ್ರಯಪತ್ರಕ್ಕೆ ಮುಡಾ ವಿಶೇಷ ತಹಶೀಲ್ದಾರ್ ಶುಲ್ಕ ಪಾವತಿ ಮಾಡಿದ್ದಾರೆ. ಮುದ್ರಾಂಕದ ಮೂಲಕ ವಿಶೇಷ ತಹಶೀಲ್ದಾರ್ ಶುಲ್ಕ ಕಟ್ಟಿದ್ದು, ಬಿಲ್ಡರ್ ಮಂಜುನಾಥ್ ಹೆಸರು ಮುದ್ರಾಂಕ ಶುಲ್ಕದಲ್ಲಿ ಉಲ್ಲೇಖವಾಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಕ್ರಯಪತ್ರ ನೋಂದಣಿ ಮಾಡಿಕೊಳ್ಳುವವರು ನೋಂದಣಿ ಶುಲ್ಕ ಪಾವತಿ ಮಾಡಬೇಕು. ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ..? ಸಿದ್ದರಾಮಯ್ಯನವರೇ ರಾಜ್ಯದ ಜನರಿಗೆ ಉತ್ತರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಮಯಿಕೃಷ್ಣ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ರೈತರಿಗೆ ನೀಡಿದ್ದ ವಕ್ಫ್ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ ರಾಜ್ಯ ಸರ್ಕಾರ..!