ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ‘ಭೈರತಿ ರಣಗಲ್’ ಚಿತ್ರ ಮೊದಲು ತಿಳಿಸಿದಂತೆ ಆಗಸ್ಟ್ 15 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರದಿಂದ ಚಿತ್ರ ಬಿಡುಗಡೆ ಮುಂದೆ ಹೋಗಿತ್ತು. ಆನಂತರ ಅಭಿಮಾನಿಗಳು ಈ ಚಿತ್ರ ಯಾವಾಗ ಬಿಡುಗಡೆಯಾಗಬಹುದೆಂದು ಕಾತುರದಿಂದ ಕಾಯುತ್ತಿದ್ದರು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಹುನಿರೀಕ್ಷಿತ ಈ ಚಿತ್ರ ನವೆಂಬರ್ 15 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಬೆಂಗಳೂರಿನ ಯಲಹಂಕದಲ್ಲಿರುವ ಗೆಲರಿಯಾ ಮಾಲ್‍ನಲ್ಲಿ ಇದೇ ಮೊದಲ ಬಾರಿಗೆ ವಿನೂತನವಾಗಿ ನಿರ್ಮಿಸಲಾಗಿದ್ದ ಅತೀ ದೊಡ್ಡ ಗ್ರ್ಯಾಫಿಟಿ ಆರ್ಟ್ ಅನ್ನು ಅನಾವರಣಗೊಳಿಸುವ ಮೂಲಕ “ಭೈರತಿ ರಣಗಲ್” ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು. ನಿರ್ಮಾಪಕಿ ಗೀತಾ ಶಿವರಾಜಕುಮಾರ್, ನಿರ್ದೇಶಕ ನರ್ತನ್ ಹಾಗೂ ನಿವೇದಿತಾ ಶಿವರಾಜಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಸ್ರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ಗ್ರ್ಯಾಫಿಟಿ ಆರ್ಟ್ ನಲ್ಲಿ ಮೂಡಿಬಂದ ಶಿವರಾಜಕುಮಾರ್ ಅವರ ಲುಕ್ಗೆ ಅಭಿಮಾನಿಗಳು ಫಿದಾ ಆದರು.
ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ಮಾತನಾಡಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಅವರು, “ಭೈರತಿ ರಣಗಲ್” ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರ. ನಮ್ಮ ಸಂಸ್ಥೆಯ ಮೊದಲ ಚಿತ್ರ “ವೇದ”ಗೆ ನೀವೆಲ್ಲಾ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದ. ಈ ಚಿತ್ರಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಇಂದು ನಿಮ್ಮೆಲ್ಲರ ಸಮ್ಮುಖದಲ್ಲಿ ವಿನೂತನ ರೀತಿಯಲ್ಲಿ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಮುಂದೆ ಬೆಳಗಾವಿಯಲ್ಲೂ ಈ ಚಿತ್ರದ ಕುರಿತಾದ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡರು.
ನಿರ್ದೇಶಕ ನರ್ತನ್ ಮಾತನಾಡಿ, ಚಿತ್ರದ ಬಿಡುಗಡೆ ದಿನಾಂಕವನ್ನು ವಿಭಿನ್ನವಾಗಿ ಅನೌನ್ಸ್ ಮಾಡಲು ನಿರ್ಧರಿಸಲಾಗಿತ್ತು. ಇದೇ ಮೊದಲ ಬಾರಿಗೆ 4800 ವಿಸ್ತೀರ್ಣದ ಬೃಹತ್ ಗ್ರ್ಯಾಫಿಟಿ ಆರ್ಟ್ ಅನಾವರಣ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸಹಸ್ರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದೀರಿ. ನಿಮಗೆಲ್ಲಾ ಅನಂತ ಧನ್ಯವಾದ. ನವೆಂಬರ್ 15 ರಂದು ಚಿತ್ರ ಬಿಡುಗಡೆಯಾಗಲಿದೆ. ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದರು.
‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರವನ್ನು ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದು, ನರ್ತನ್ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದವರಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತ ನಿರ್ದೇಶನ “ಭೈರತಿ ರಣಗಲ್” ಚಿತ್ರಕ್ಕಿದೆ.
ಇದನ್ನೂ ಓದಿ : ನಿರ್ದೇಶಕ ಬ್ರಹ್ಮರವರಿಗೆ ಬೆಂಗಳೂರು ಸಂಸ್ಥೆಯ ದಾದಾಸಾಹೇಬ್ ಫಾಲ್ಕೆ ಅಚೀವ್ ಮೆಂಟ್-2024 ಪ್ರಶಸ್ತಿ..!