ಯುವನಟ ಭರತ್‌ಕುಮಾರ್ ಮೆಜೆಸ್ಟಿಕ್-2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು, ಆ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಇನ್ನೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಲವ್ ಈಸ್ ಲೈಫ್’ ಎಂಬ ಹೊಸ ಸಿನಿಮಾದಲ್ಲಿ ಭರತ್‌ಕುಮಾರ್, ಮಿಷಲ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಅಂಬಿಗಾ ಕ್ರಿಯೇಶನ್ಸ್ ಮೂಲಕ ಜಿ.ಡಿ. ಸಂತೋಷ್ ಕುಮಾರ್ ಹಾಗೂ ಎನ್.ಹನುಮಂತಪ್ಪ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಿ.ಶಿವರಾಜ್ ಅವರ ಕಥೆ, ಚಿತ್ರಕಥೆ, ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರದ ಬಗ್ಗೆ ಜಿ. ಶಿವರಾಜ್ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಸುಂದರನಾಥ ಸುವರ್ಣ, ಅಶೋಕ್ ಕಶ್ಯಪ್ ಅವರ ಜೊತೆ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿದ್ದಲ್ಲದೆ, ಎಲ್ಲಾ ವಿಭಾಗಗಳಲ್ಲಿ ಕೆಲಸಮಾಡಿ ಅನುಭವ ಪಡೆದಿದ್ದೇನೆ. ಮೂರು ತಿಂಗಳು ಕೂತು ಈ ಚಿತ್ರದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದೇನೆ. ಇದೊಂದು ವಿಭಿನ್ನ ಪ್ರೇಮಕಥೆ. ಈ ಥರನೂ ಲವ್ ಮಾಡಬಹುದಾ ಅಂತನಿಸೋ ಚಿತ್ರ. ವಿದೇಶದಿಂದ ಇಂಡಿಯಾಗೆ ಬರೋ ಹುಡುಗ ಇಲ್ಲಿನ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸುತ್ತಾನೆ ಅನ್ನೋದನ್ನು ಪ್ರೇಮಕಥೆಯೊಂದರ ಹಿನ್ನೆಲೆ ಇಟ್ಟುಕೊಂಡು ಹೇಳುತ್ತಿದ್ದೇವೆ. ಶೃಂಗೇರಿಯಲ್ಲಿ ಸೆ.9ರಿಂದ ಚಿತ್ರೀಕರಣ ಆರಂಭಿಸಿ ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸುವ ಪ್ಲಾನ್ ಇದೆ, ಅಲ್ಲಿ ಸುತ್ತಲೂ ಬೆಟ್ಟ ಇರುವ ಒಂಟಿ ಮನೆಯನ್ನು ಚಿತ್ರೀಕರಣಕ್ಕಾಗಿ ಹುಡುಕಿದ್ದೇವೆ, ವಿಶೇಷವಾಗಿ ಆ ಮನೆಯೂ ಚಿತ್ರದ ಒಂದು ಭಾಗವಾಗಿ ಮೂಡಿಬರಲಿದೆ, ಇಲ್ಲಿ ನಾಯಕನ ಪಾತ್ರಕ್ಕೆ ಭರತ್ ಅವರೇ ಸೂಕ್ತ ಅನಿಸಿತು. ಆತನಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತೇನೆ. ಇದನ್ನು ಚಾಲೆಂಜ್ ಆಗಿ ತಗೊಂಡಿದ್ದು, ಪ್ರೂವ್ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ನಂತರ ನಿರ್ಮಾಪಕ ಸಂತೋಷ್‌ಕುಮಾರ್ ಅವರು, ನನಗೆ ಮೊದಲಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಜಾಸ್ತಿ. ನಾನೂ ಒಂದು ಸಿನಿಮಾ ನಿರ್ಮಾಣ ಮಾಡಬೇಕು ಅಂದ್ಕೊಂಡಿದ್ದೆ, ಆ ಸಮಯದಲ್ಲಿ ಈ ಡೈರೆಕ್ಟರ್ ಪರಿಚಯ ಆದರು, ಈ ಥರ ಸಿನಿಮಾ ಮಾಡೋ ಐಡಿಯಾ ಇದೆ ಎಂದರು. ಅವರು ಹೇಳಿದ ಕಥೆ ತುಂಬಾ ಚೆನ್ನಾಗಿತ್ತು, ಅದನ್ನು ನಮ್ಮ ತಾಯಿಗೆ ಹೇಳಿದಾಗ ಅವರೂ ಸಹ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟರು. ಹಾಗೇ ನನಗೆ ಒಂದೊಳ್ಳೇ ಟೀಮ್ ಸಿಕ್ಕಿದೆ ಎಂದು ಹೇಳಿದರು.
ಇದು ನನ್ನ 2ನೇ ಚಿತ್ರ, ನಾನು ಓದಿದ್ದೆಲ್ಲಾ ವಿದೇಶದಲ್ಲೇ ಆದರೂ ನನ್ನ ತಂದೆ, ತಾಯಿ ಇಲ್ಲಿನವರೇ. ಇಲ್ಲಿನ ಜನರಲ್ಲಿ ಪ್ರೀತಿ ಅಭಿಮಾನ ಜಾಸ್ತಿ ಇರುತ್ತೆ, ಚಿತ್ರದಲ್ಲಿ ನಾನೊಬ್ಬ ಲವರ್‌ಬಾರ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪರ್ ಫಾರ್ಮನ್ಸ್ ತೋರಿಸಲು ಚಿತ್ರದಲ್ಲಿ ಅವಕಾಶ ಇದೆ. ಸಿನಿಮಾ ನೋಡುವಾಗ ಲವ್ ಸ್ಟೋರಿಯಲ್ಲಿ ಈ ರೀತಿನೂ ಪ್ರಯೋಗ ಮಾಡಬಹುದಾ ಅನಿಸುತ್ತೆ. ಕಥೆಯಲ್ಲಿ ಪಾತ್ರ ತುಂಬಾ ಹೈಲೈಟ್ ಆಗುತ್ತದೆ, ಅದಕ್ಕೊಂದು ಟ್ವಿಸ್ಟ್ ಇದೆ. ಇದರ ಜೊತೆಗೊಂದು ಕ್ಯೂಟ್ ಲವ್ ಸ್ಟೋರಿನೂ ಇದೆ ಎಂದು ನಾಯಕ ಭರತ್ ಕುಮಾರ್ ಹೇಳಿದರು.
ನಾಯಕಿ ಮಿಷಲ್ ಅವರು, ಇದು ನನ್ನ ಮೊದಲ ಚಿತ್ರ, ನಾನು ರಿಚ್ ಫ್ಯಾಮಿಲಿ ಹುಡುಗಿಯಾಗಿ ಕಸಣಿಸಿಕೊಂಡಿದ್ದೇನೆ. ಶ್ರೀಮಂತ ಕುಟುಂಬದ ಹುಡುಗಿಯಾದರೂ, ತುಂಬಾ ಸರಳ, ಸಾಮಾನ್ಯ ಹುಡುಗಿಯಾಗಿರುವೆ. ಶ್ರೀಮಂತಿಕೆಯ ದರ್ಪ ತೋರಲ್ಲ. ಇಂಥ ಪಾತ್ರ ಸಿಕ್ಕಿದ್ದಕ್ಕೆ ತುಂಬಾ ಖುಷಿ ಆಯ್ತು ಎಂದರು. ಸಂಗೀತ ನಿರ್ದೇಶಕ ಎ.ಟಿ. ರವೀಶ್ ಮಾತನಾಡುತ್ತ ಚಿತ್ರದಲ್ಲಿ ಐದು ಹಾಡುಗಳಿದ್ದು, ಕಥೆಯನ್ನು ಬಿಟ್ಟು ಯಾವ ಹಾಡನ್ನೂ ಮಾಡಿಲ್ಲ ಎಂದು ಹೇಳಿದರು. ಚಿತ್ರಕ್ಕೆ ಎಂ.ಬಿ. ಅಳ್ಳೀಕಟ್ಟಿ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ಪೂಜಾಗೌಡ, ಅಮಿತ್ ಪ್ರಮುಳ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ – ರೂಟ್ ಚೇಂಜ್ ಮಾಡಿ ಕರೆದೊಯ್ಯುತ್ತಿರುವ ಪೊಲೀಸರು..!