Download Our App

Follow us

Home » ಸಿನಿಮಾ » ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ..!

ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ..!

ಗೋಲ್ಡನ್ ಸ್ಟಾರ್ ಗಣೇಶ್-ಮಾಳವಿಕಾ ನಾಯರ್‌ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದಲ್ಲಿ ಮೂಡಿಬಂದಿದೆ. ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತರಾಗಿರುವ ಅರ್ಜುನ್ ಜನ್ಯ ಸಂಗೀತ ನೀಡಿರುವ ಏಳು ಹಾಡುಗಳು ಈ ಚಿತ್ರದಲ್ಲಿದೆ. ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರ ಆಗಸ್ಟ್ 15 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ “ಕೃಷ್ಣಂ ಪ್ರಣಯ ಸಖಿ” ಪ್ರೇಕ್ಷಕರ ಮನ ತಲುಪಿದೆ. ನಿರೀಕ್ಷೆಗೂ ಮೀರಿ ಹಾಡುಗಳು ಹಿಟ್ ಆಗಿದ್ದು, ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡಿರುವ ಆನಂದ್ ಆಡಿಯೋದವರು ಸಮಾರಂಭ ಆಯೋಜಿಸಿದ್ದರು. ಹಾಡುಗಳನ್ನು ಬರೆದಿರುವವರನ್ನು ಹಾಗೂ ಹಾಡಿದರವನ್ನು ಫಲಕ ನೀಡಿ ಸನ್ಮಾನಿಸಿದರು. ಗಾಯಕರಾದ ಚಂದನ್ ಶೆಟ್ಟಿ, ಜಸ್ಕರಣ್ ಸಿಂಗ್, ಗೀತರಚನಕಾರ ನಿಶಾನ್ ರೈ ಅವರನ್ನು ಹಾಗೂ ಚಿತ್ರತಂಡದ ಸದಸ್ಯರನ್ನು ಆನಂದ್ ಆಡಿಯೋ ಶ್ಯಾಮ್ ಮತ್ತು ಆನಂದ್ ಆತ್ಮೀಯವಾಗಿ ಸನ್ಮಾನಿಸಿದರು.

ನಟ ಗಣೇಶ್ ಅವರು, ಇಂದು ನಾಲ್ಕನೇ ಹಾಡು ಬಿಡುಗಡೆಯಾಗಿದೆ, ಈವರೆಗೂ ಬಿಡುಗಡೆಯಾಗಿರುವ ಮೂರು ಹಾಡುಗಳು ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ‌. ಹಾಗಾಗಿ ಈ ಸಮಾರಂಭವನ್ನು ಆನಂದ್ ಆಡಿಯೋದವರು ಆಯೋಜಿಸಿದ್ದಾರೆ‌. ಅವರಿಗೆ ಧನ್ಯವಾದಗಳು, ಇತ್ತೀಚೆಗೆ ಹಾಡುಗಳು ಹಿಟ್ ಆಗುವುದು ಬಹಳ ಕಡಿಮೆ. ಮೊದಲೆಲ್ಲಾ ಆಡಿಯೋ ಹಿಟ್‍ ಅಂತ ಕಾರ್ಯಕ್ರಮ ಮಾಡುತ್ತಿದ್ದೆವು. ಇತ್ತೀಚೆಗೆ ಆಗಿರಲಿಲ್ಲ, ಮೂರನೇ ಹಾಡು ಯಶಸ್ವಿಯಾದಾಗ ಯಾಕೆ ಇಂಥದ್ದೊಂದು ಕಾರ್ಯಕ್ರಮ ಮಾಡಬಾರದು ಎಂದು ಆನಂದ್ ಆಡಿಯೋದವರು ಹೇಳುತ್ತಿದ್ದರು. ಆನಂದ್ ಆಡಿಯೋದವರ ಜೊತೆಗೆ ನನ್ನದು ಬಹಳ ದೊಡ್ಡ ಸಂಬಂಧ. ನನ್ನ ಚಿತ್ರಜೀವನದ ಯಶಸ್ಸಿಗೆ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಆ ಕ್ರೆಡಿಟ್‍ ಆನಂದ್‍ ಆಡಿಯೋದವರಿಗೂ ಸಲ್ಲಬೇಕು ಎಂದರು.

ಈ ಚಿತ್ರದ ಆಡಿಯೋ ಹಕ್ಕುಗಳನ್ನು ಡಬ್ಬಲ್‍ ದುಡ್ಡು ಕೊಟ್ಟು ಆನಂದ್ ಆಡಿಯೋದವರು ಕೊಂಡಿದ್ದಾರೆ. ಮುಂದಿನ ಚಿತ್ರಕ್ಕೆ ಇನ್ನೂ ಡಬ್ಬಲ್‍ ದುಡ್ಡು ಕೊಡಲಿ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರತಿಯೊಬ್ಬ ಗೀತರಚನಕಾರ, ಗಾಯಕರು ಎಲ್ಲರಿಗೂ ಧನ್ಯವಾದಗಳು. ಜಸ್ಕರಣ್ ಅವರು ವೇದಿಕೆ ಮೇಲೆ ನಿಂತು ಹಾಡಿದಾಗ ದೈವಿಕ ಭಾವನೆ ಮೂಡಿತು. ಇವರು ಯಾರೋ ನಮ್ಮ ತರಹದವರೇ ಅಂತನಿಸಿತು. ತುಂಬಾ ಚೆನ್ನಾಗಿ ಹಾಡಿದ್ದಾರೆ. ಅದರಲ್ಲೂ “ದ್ವಾಪರ” ಹಾಡಂತೂ ಸಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿದೆ. ರೀಲ್ಸ್ ಮಾಡುತ್ತಿರುವವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಹಾಡುಗಳ ಯಶಸ್ಸಿನ ಹೆಚ್ಚಿನ ಭಾಗದ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಏಕೆಂದರೆ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಬಹಳ ಬ್ಯುಸಿ. ಅವರನ್ನು ಹಿಡಿಯೋದೇ ಕಷ್ಟ. ಮಧ್ಯಾಹ್ನದ ಊಟ ಆಯ್ತಾ ಎಂದು ಫೋನ್ ಮಾಡಿದರೆ, ರಾತ್ರಿ ವಾಪಸ್ಸು ಮಾಡುತ್ತಾರೆ. ಅಷ್ಟು ಬ್ಯುಸಿ. ಅವರಿಂದ ಇಷ್ಟು ಕೆಲಸ ತೆಗೆದಿದ್ದಾರೆ. ಒಂದೊಂದು ಹಾಡು ಸಹ ದೊಡ್ಡ ಹಿಟ್‍ ಆಗುತ್ತದೆ, ಆ ತರಹ ಮಾಡುತ್ತೀನಿ ಎಂದು ಹೇಳುತ್ತಿದ್ದರು. ಅದನ್ನು ನಿಜ ಮಾಡಿ ತೋರಿಸಿದ್ದಾರೆ ಎಂದು ಗಣೇಶ್ ಹೇಳಿದರು.

ಅರ್ಜುನ್‍ ಜನ್ಯ ಅವರು ಮ್ಯಾಜಿಕಲ್‍ ಕಂಪೋಸರ್ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ಒಂದು ಸಂಗೀತಮಯ ಚಿತ್ರವಾಗಬೇಕು ಎಂಬ ಆಸೆ ನನಗಿತ್ತು. ಆದರೆ, ಹೀಗೇ ಆಗುತ್ತದೆ ಎಂದು ಹೇಳುವುದು ಕಷ್ಟ. ಅರ್ಜುನ್‍ ಬಹಳ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಮಗೆ ಸಮಯ ಕೊಟ್ಟು ಈ ರೀತಿ ಜನಪ್ರಿಯ ಹಾಡುಗಳನ್ನು ಮಾಡಿಕೊಟ್ಟಿರುವುದು ಬಹಳ ಖುಷಿಯ ವಿಷಯ. ಚಿತ್ರದಲ್ಲಿ ಮೊದಲು ಒಂಬತ್ತು ಹಾಡುಗಳಿದ್ದವು. ಕೊನೆಗೆ ಕಡಿಮೆಯಾಗಿ, ಏಳು ಹಾಡುಗಳಿವೆ. ಎಲ್ಲಾ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆ ನನಗೆ ಮೊದಲ ದಿನದಿಂದಲೇ ಇತ್ತು. ಅದು ಪ್ರೂವ್‍ ಆಗಿದೆ. ಈ ವಿಷಯದಲ್ಲಿ ಅರ್ಜುನ್‍ ಜನ್ಯ ಅವರಿಗೆ ಧನ್ಯವಾದ ತಿಳಿಸಬೇಕು.

ಈ ಹಾಡುಗಳನ್ನು ಪ್ರಮೋಟ್‍ ಮಾಡುತ್ತಿರುವ ಮತ್ತು ನನ್ನ ಮೇಲೆ ನಂಬಿಕೆ ಇಟ್ಟು ಚಿತ್ರಕ್ಕೆ ಹಣ ಹೂಡಿದ ನಿರ್ಮಾಪಕ ಪ್ರಶಾಂತ್‍ ಅವರಿಗೆ ಧನ್ಯವಾದಗಳು. ಈ ಚಿತ್ರ ಪ್ರಮುಖವಾಗಿ ಆಗುವುದಕ್ಕೆ ಗಣೇಶ್‍ ಕಾರಣ. ಅವರು ನನ್ನ ಮೇಲೆ ನಂಬಿಕೆ ಇಟ್ಟರು. ನನ್ನ ಜಾನರ್ ನಿಂದ ಆಚೆ ಬಂದು ಚಿತ್ರ ಮಾಡುವುದಕ್ಕೆ ಪ್ರೋತ್ಸಾಹ ಕೊಟ್ಟರು. ಪ್ರತಿ ಹಂತದಲ್ಲೂ ತೊಡಗಿಸಿಕೊಂಡರು. ‘ದ್ವಾಪರ’ವರೆಗೂ ಬೇರೆಬೇರೆ ರೀತಿಯ ಹಾಡುಗಳಿದ್ದವು. ಇನ್ನು ಮುಂದಿನ ಒಂದು ವಾರದಲ್ಲಿ ಮೆಲೋಡಿ ಹಾಡುಗಳು ಬರಲಿವೆ. ಈ ಚಿತ್ರಕ್ಕೆ ಟ್ರೇಲರ್ ಅವಶ್ಯಕತೆ ಇರಲಿಲ್ಲ ಎಂದು ಒಂದು ವರ್ಷದ ಹಿಂದೆ ಅನಿಸಿತ್ತು. ಇದೊಂದು ಮ್ಯೂಸಿಕಲ್‍ ಚಿತ್ರವಾದ್ದರಿಂದ, ಈ ಚಿತ್ರವನ್ನು ಹಾಡುಗಳಿಂದ ಮಾತ್ರ ಪ್ರಮೋಟ್‍ ಮಾಡುವುದು ನನ್ನ ಆಸೆ. ಹಾಗಾಗಿ, ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿಲ್ಲ. ಇದು ಈ ಚಿತ್ರಕ್ಕೆ ಮಾತ್ರ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದರು.

ನಟಿ ಶರಣ್ಯ ಶೆಟ್ಟಿ, ಹಿರಿಯ ನಟ ರಾಮಕೃಷ್ಣ, ಕಾರ್ಯಕಾರಿ ನಿರ್ಮಾಪಕ ಶರತ್, ಗಾಯಕರಾದ ಚಂದನ್ ಶೆಟ್ಟಿ, ಜಸ್ಕರಣ್ ಸಿಂಗ್, ಹಾಡು ಬರೆದಿರುವ ನಿಶಾನ್ ರೈ ಹಾಗೂ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಮತ್ತು ಆನಂದ್ ಹಾಡುಗಳು ಗೆದ್ದಿರುವ ಆನಂದವನ್ನು ಮಾತಿನ ಮೂಲಕ ಹಂಚಿಕೊಂಡರು.

ಇದನ್ನೂ ಓದಿ : ನಾವು ನಿಮ್ಮಂತೆ ಊರುಗಳನ್ನು ಹಾಳು ಮಾಡಿ ಬೆಳೆದಿಲ್ಲ – ಡಿಕೆಶಿ ವಿರುದ್ಧ ಹೆಚ್​ಡಿಕೆ ಕಿಡಿ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here