ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜ.16ರಿಂದ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತಿವೆ. ಈ ನಡುವೆ ರಾಮನ ಕಾಣಲು ಕೋಟ್ಯಂತರ ಭಕ್ತರು ಕಾದು ಕುಳಿತಿದ್ದಾರೆ.
ಲಕ್ಷಾಂತರ ಮಂದಿ ಇದಕ್ಕಾಗಿ ನೂರಾರು ರೀತಿಯ ವ್ರತ ಕೈಗೊಂಡಿದ್ದಾರೆ. ಇದೀಗ ಈ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸೇರಿಕೊಂಡಿದ್ದಾರೆ.
ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿದ್ದು, ಹೀಗಾಗಿ ಪ್ರಧಾನಿ ಮೋದಿ 11 ದಿನಗಳ ಉಪವಾಸ ವ್ರತಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ವ್ರತವು ರಾಮನಿಗಾಗಿ ಎಂದಿದ್ದಾರೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ತಾವು ವಿಶೇಷ ಅನುಷ್ಠಾನ ನಡೆಸುತ್ತಿರುವ ಕುರಿತು ವಿಶೇಷ ಸಂದೇಶವನ್ನು ನೀಡಿದ್ದಾರೆ.
“ಅಯೋಧ್ಯೆಯ ರಾಮಲಲ್ಲನ ಪ್ರಾಣಪ್ರತಿಷ್ಠೆಗೆ ಇನ್ನು ಕೇವಲ 11 ದಿನಗಳು ಬಾಕಿ ಇವೆ. ಈ ಪುಣ್ಯ ಸಂದರ್ಭಕ್ಕೆ ನಾನೂ ಸಾಕ್ಷಿಯಾಗುತ್ತಿರುವುದು ನನ್ನ ಅದೃಷ್ಟ. ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ದೇಶದ ಎಲ್ಲ ನಾಗರಿಕರ ಪ್ರತಿನಿಧಿಯಾಗಿ ಭಾಗವಹಿಸುವುದಕ್ಕೆ ಪ್ರಭು ಶ್ರೀರಾಮಚಂದ್ರನು ನನಗೆ ಅವಕಾಶ ಮಾಡಿಕೊಟ್ಟಿದ್ದಾನೆ.
ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ 11 ದಿನಗಳ ಉಪವಾಸ ವ್ರತಾಚರಣೆ ಶುರುಮಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ (ಎಕ್ಸ್)ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ನಾಸಿಕ್ ಧಾಮದಿಂದ ವ್ರತ ಆರಂಭಿಸಿದ್ದು, ಸ್ವಾಮಿ ವಿವೇಕಾನಂದರ ಜಯಂತಿ ದಿನವೇ ವ್ರತ ಆಚರಣೆ ಮಾಡಿದ್ದಾರೆ.
“ಸಾವಿರಾರು ವರ್ಷಗಳ ಕನಸು ನನಸಾಗುವ ಕಾಲ ಬಂದಿದೆ. ಅಸಂಖ್ಯ ಜನರ ತ್ಯಾಗ, ಹೋರಾಟ, ಬಲಿದಾನದ ಸ್ಮರಣೆ ಇದು. ನೀವು ನನ್ನೊಂದಿಗಿದ್ದೀರೆಂಬ ಭರವಸೆ ಜತೆ ಗರ್ಭಗುಡಿ ಪ್ರವೇಶಿಸುತ್ತೇನೆ. ನೀವು ಲಿಖಿತವಾಗಿ ನನಗೆ ಪತ್ರ ಬರೆಯುವ ಮೂಲಕ ಆಶೀರ್ವಾದ ಮಾಡಿ,
ನಮೋ App ಮೂಲಕ ಪತ್ರ ಬರೆದು ನನಗೆ ಆಶೀರ್ವದಿಸಿ. ಶ್ರೀರಾಮನ ಭಕ್ತಿಯಲ್ಲಿ ಮಿಂದೇಳಿ. ಜೈ ಶ್ರೀರಾಮ್” ಎಂದು ಸಂದೇಶ ಸಾರಿದ್ದಾರೆ.
“ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಶಾಸ್ತ್ರಗಳಲ್ಲಿ ವಿವರಿಸಿರುವಂತೆ ವಿಸ್ತೃತ ಮತ್ತು ಸಮಗ್ರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಅನುಸರಿಸಬೇಕಾದ ವಿಸ್ತೃತ ನಿಯಮಾನುಷ್ಠಾನಗಳನ್ನು ಶಾಸ್ತ್ರಗಳಲ್ಲಿ ನೀಡಲಾಗಿದೆ. ಇದನ್ನು ಪ್ರಾಣಪ್ರತಿಷ್ಠಾನ ಮಹೋತ್ಸವದ ಹಲವು ದಿನಗಳ ಮೊದಲೇ ಶುರುಮಾಡಬೇಕು.
ರಾಮ ಭಕ್ತನಾಗಿ ರಾಮ ಮಂದಿರವನ್ನು ನಿರ್ಮಿಸುವ ಮತ್ತು ಜೀವನವನ್ನು ಪವಿತ್ರಗೊಳಿಸುವ ಆಧ್ಯಾತ್ಮದ ಕೆಲಸಕ್ಕಾಗಿ ಸಮರ್ಪಿಸಿದ್ದೇನೆ. ಎಲ್ಲ ಕಾರ್ಯಗಳು ಮತ್ತು ಜವಾಬ್ದಾರಿಗಳ ಹೊರತಾಗಿಯೂ, ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗಾಗಿ ಅಗತ್ಯವಾದ ಎಲ್ಲ ನಿಯಮಗಳನ್ನು ಪಾಲಿಸಲು ಮುಂದಾಗಿದ್ದೇನೆ”ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರಾಮ ಮಂದಿರದ ಕೆಲವು ವಿಶೇಷತೆಗಳು : ಈ ಮಂದಿರ ನಿರ್ಮಾಣದಲ್ಲಿ ಕಬ್ಬಿಣ, ಸಿಮೆಂಟ್ ಬಳಕೆಯೇ ಆಗಿಲ್ಲ, ಇದರಿಂದಾಗಿ ಈ ದೇವಾಲು ಭೂಕಂಪಕ್ಕೆ ಬಗ್ಗಲ್ಲ, ಸಾವಿರ ವರ್ಷಗಳಿಗಿಂತಲೂ ಅಧಿಕ ಕಾಲ ಉತ್ತಮಸ್ಥಿತಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು.
ಶ್ರೀರಾಮ ಮಂದಿರದಲ್ಲಿ ಭಕ್ತರಿಗೆ ಕಲ್ಲು ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು. ಈ ದೇವಾಲಯದಲ್ಲಿ ಕಲಶಾಭಿಷೇಕ ಮಾಡಲು 1 ಲಕ್ಷ ರುಪಾಯಿ ಪಾವತಿಸಬೇಕು, ಯಾರು ಸಮಾಜ ಸೇವೆ ಮಾಡಿದ್ದಾರೋ ಅವರಿಗೆ ಮಾತ್ರ ಈ ಪೂಜೆ ಮಾಡಿಸಲು ಅವಕಾಶ ಸಿಗುವುದು. ಈ ಹಣವನ್ನು ಕೂಡ ಬಡವರಿಗೆ ಮನೆ ನಿರ್ಮಿಸಲು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆ ಖರ್ಚುಗಳಿಗೆ ವಿನಿಯೋಗಲಾಗಿಸುವುದು.
ಇದನ್ನೂ ಓದಿ : ಜನಾರ್ದನ ರೆಡ್ಡಿ BJPಗೆ ಬಂದರೆ ಅಭ್ಯಂತರವಿಲ್ಲ; ಶ್ರೀರಾಮುಲು