ಮೈಸೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ರಾಜ್ಯಕ್ಕೆ ಪ್ರಧಾನಿ ಎಂಟ್ರಿಯಿಂದ ರಂಗೇರಿದ ಲೋಕ ಅಖಾಡ ಪ್ರಧಾನಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ಮೋದಿ MI-17 ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಈಗಾಗಲೇ ಎಸ್.ಪಿ.ಜಿ ಯಿಂದ ವೈಮಾನಿಕ ಪರಿಶೀಲನೆ ನಡೆಸಿ ಓವಲ್ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ಗೂ ಸಿದ್ದತೆ ಮಾಡಲಾಗಿದೆ. ಇನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದ್ದು,ಇದರೊಂದಿಗೆ ಮೋದಿ ಆಗಮದ ಹಿನ್ನಲೆ SPG ಟೀಂ ಮೈಸೂರಿನಲ್ಲಿ ಭದ್ರತೆ ಪರಿಶೀಲನೆ ಮಾಡಿದೆ. ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 4.30ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಯುವ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ವೇದಿಕೆ ಮೇಲೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಮಾಜಿ ಸಿಎಂಗಳಾದ ಬಿಎಸ್‌ವೈ, ಹೆಚ್‌ಡಿಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಸೇರಿ ಅನೇಕ ಬಿಜೆಪಿ, ಜೆಡಿಎಸ್ ನ ಪ್ರಮುಖ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.
ಒಂದೇ ವೇದಿಕೆಯಲ್ಲಿ ಎರಡು ಪಕ್ಷದ ನಾಯಕರು ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ಈ ವೇದಿಕೆಯಲ್ಲಿ ಪ್ರದಾನಿ ಮೋದಿ ಅವರು ಉಭಯ ನಾಯರು ಹಾಗೂ ಕಾರ್ಯಕರ್ತರಿಗೆ ಒಗ್ಗಟ್ಟಿನ ಹೋರಾಟಕ್ಕೆ ಸಂದೇಶ ನೀಡಲಿದ್ದಾರೆ. ನಂತರ ವೇದಿಕೆಯಲ್ಲಿ ಉಭಯ ನಾಯಕರು ಜೊತೆಯಾಗಿ ಕಾಂಗ್ರೆಸ್ ಪಕ್ಷದ ಮೇಲೆ ಜಂಟಿಯಾಗಿ ಸಮರ ಸಾರಲಿದ್ದಾರೆ.
ಇನ್ನು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಂತರ ಪ್ರಧಾನಿ ಮೋದಿ ಸಂಜೆ 5.20ರ ಸುಮಾರಿಗೆ ಮೈಸೂರಿನಿಂದ ಮಂಗಳೂರಿಗೆ ತೆರಳಲಿದ್ದಾರೆ. ರಾ.7.45ಕ್ಕೆ ಮಂಗಳೂರು ಏರ್ಪೋಟ್ನಲ್ಲಿ ಪ್ರಧಾನಿ ಮೋದಿ ಲ್ಯಾಂಡ್ ಆಗಲಿದ್ದು, ಆ ಬಳಿಕ ರಸ್ತೆ ಮಾರ್ಗವಾಗಿ ಲೇಡಿಹಿಲ್ ನಾರಾಯಣ ಗುರು ಸರ್ಕಲ್ ಗೆ ಆಗಮಿಸಲಿದ್ದಾರೆ. ತುಳುವರ ಹೊಸ ವರ್ಷವಾದ ‘ಬಿಸು ಪರ್ಬ’ದ ದಿನವೇ ಆಗಮಿಸಲಿರುವ ಮೋದಿ ಮಂಗಳೂರಿನ ಹೃದಯ ಭಾಗವಾದ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ತೆರೆದ ವಾಹನದಲ್ಲಿ ಬರೋಬ್ಬರಿ ಒಂದು ಗಂಟೆಗಳ ಕಾಲ ರೋಡ್ ಶೋ ಮೂಲಕ ಬಿಜೆಪಿ ಪರ ಮತಬೇಟೆ ಮಾಡಲಿದ್ದಾರೆ. ಇನ್ನು ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – NIA ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಂಕಿತರು..!