ಕಲಬುರಗಿ : ಲೋಕಸಭೆ ಕುರುಕ್ಷೇತ್ರಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ಲೋಕಸಭೆಗೆ ದಿನಾಂಕ ಘೋಷಣೆ ಆಗಲಿದೆ. ಈ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಿನಿಂದಲೇ ಪ್ರಧಾನಿ ಮೋದಿ ಅಬ್ಬರದ ಪ್ರಚಾರಕ್ಕೆ ಚಾಲನೆ ನೀಡುತ್ತಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ತೆಲಂಗಾಣದ ನಾಗರಕರ್ನೂಲ್ ನಿಂದ ಸೇನಾ ಹೆಲಿಕ್ಯಾಪ್ಟರ್ ಮೂಲಕ ಹೊರಡುವ ಮೋದಿ, 2 ಗಂಟೆ 5 ನಿಮಿಷಕ್ಕೆ ಡಿಎಆರ್ ಮೈದಾನಕ್ಕೆ ಬಂದು ತಲುಪಲಿದ್ದಾರೆ. ಬಳಿಕ ಎನ್.ವಿ ಮೈದಾನದ ವರೆಗೆ ಒಂದೂವರೆ ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ. 13 ರಿಂದ 15 ನಿಮಿಷ ರೋಡ್ ಶೋ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಮೋ ಕಾರ್ಯಕ್ರಮದ ಹಿನ್ನಲೆ, ಭದ್ರತಾ ದೃಷ್ಟಿಯಿಂದ 15 ಕಿಲೋ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ. ಪೋಲಿಸ್ ಹೆಲಿಪ್ಯಾಡ್ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಲೂ ಬೀಗಿ ಪೋಲಿಸ್ ಬಂದೊಬಸ್ತ್ ಮಾಡಲಾಗಿದೆ.
ಮಧ್ಯಾಹ್ನ 2 ಗಂಟೆಗೆ ಶುರುವಾಗುವ ಈ ಕಾರ್ಯಕ್ರಮದಲ್ಲಿ ಅಂದಾಜು 2 ಲಕ್ಷ ಜನ ಸೇರಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕಾಗಿ ನಗರದ ಎನ್‌ವಿ ಮೈದಾನದಲ್ಲಿ ಭರದ ಸಿದ್ಧತೆ ಸಹ ಮಾಡಲಾಗಿದೆ. ಇನ್ನು ಮಿನಿ ರೋಡ್ ಶೋ ಬಳಿಕ ನೇರ ಎನ್.ವಿ ಮೈದಾನಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇನ್ನು ಮೋದಿ ಅವರ ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಘಟಕ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಲೋಕಸಮರಕ್ಕೆ ದಿನಾಂಕ ಘೋಷಣೆಯಾಗಲಿದೆ. ನೀತಿ ಸಂಹಿತೆ ಜಾರಿಗೆ ಕೆಲವೇ ಕ್ಷಣಗಳ ಮುನ್ನ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಮೋದಿ ಭಾಷಣದ ಮೇಲೆ ದೇಶದ 140 ಕೋಟಿ ಜನರ ಕಣ್ಣು ಬಿದ್ದಿದೆ.
ಇದನ್ನೂ ಓದಿ : ಲೋಕಸಭಾ ಕುರುಕ್ಷೇತ್ರದ ಕದನಕ್ಕೆ ಇಂದು ಮುಹೂರ್ತ ಫಿಕ್ಸ್ – ಚುನಾವಣಾ ಆಯೋಗದಿಂದ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸುದ್ದಿಗೋಷ್ಟಿ..!