ಹಾಸನ : ಯುವಕ-ಯುವತಿ ಇಬ್ಬರೂ ಕಾಲೇಜಿನ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು ಕೆಲ ಅಸಮಾಧಾನದ ಬಳಿಕ ಇಬ್ಬರೂ ಪ್ರೇಮಿಗಳು ದೂರವಾಗಿದ್ದರು. ಇದೇ ವೇಳೆ ತಡರಾತ್ರಿ ಹೊಸ ವರ್ಷದ ಆಚರಣೆಗೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಪ್ರಿಯಕರನ ಬಳಿ ಯುವತಿ ಗಲಾಟೆ ತೆಗೆದು ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಹಾಸನ ತಾಲೂಕಿನ ಎ.ಗುಡುಗನಹಳ್ಳಿ ಗ್ರಾಮದ 24 ವರ್ಷದ ಮನುಕುಮಾರ್ ಎಂಬುವವರೇ ಪ್ರಿಯತಮೆಯಿಂದ ಚಾಕು ಇರಿತಕ್ಕೆ ಒಳಗಾದವರು. ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್‌ನಲ್ಲಿ ಹೊಸ ವರ್ಷದ ತಡರಾತ್ರಿ ದುರ್ಘಟನೆ ನಡೆದಿದೆ. ಶಶಿಕಲಾ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಮನುಕುಮಾರ್ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು. ಈ ವೇಳೆ ಇವರಿಬ್ಬರಲ್ಲಿ ಪ್ರೀತಿ ಪ್ರೇಮ ಇತ್ತು. ಕೆಲ ದಿನಗಳಿಂದ ಇಬ್ಬರೂ ಬೇರೆ ಬೇರೆಯಾಗಿದ್ದರು. ಇಬ್ಬರ ಮಧ್ಯೆ ಫೋನ್ ಸಂಪರ್ಕ ಕೂಡ ಇರಲಿಲ್ಲ. ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಮನುಕುಮಾರ್ ವಿಚಾರ ತಿಳಿದುಕೊಂಡು ಪದೇ ಪದೇ ಮನುಕುಮಾರ್‌ಗೆ ಗೆಳತಿ ಶಶಿಕಲಾ ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ.
ತಡರಾತ್ರಿ 12.30ಕ್ಕೆ ಹೋಟೆಲ್ ಬಳಿ ಬಂದ ಶಶಿಕಲಾ ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಹೋಗಿದ್ದಾಳೆ. ಅಷ್ಟರಲ್ಲಿ ಮನುಕುಮಾರ್ ಗೇಟ್ ಬಳಿ ಬಂದಿದ್ದಾನೆ. ಈ ವೇಳೆ ಶಶಿಕಲಾ ಹಾಗೂ ಮನುಕುಮಾರ್ ನಡುವೆ ಜಗಳ ಶುರುವಾಗಿದೆ. ತಕ್ಷಣ ಜಗಳವನ್ನು ಮನುಕುಮಾರ್ ಸ್ನೇಹಿತರು ಬಿಡಿಸಲು ಮುಂದಾದರು. ನೋಡುತ್ತಿದ್ದಂತೆ ಮನುಕುಮಾರ್‌ಗೆ ಶಶಿಕಲಾ ಏಕಾಏಕಿ ಚಾಕುವಿನಿಂದ ಇರಿದಿದ್ದಾಳೆ. ಕೂಡಲೇ ಮನುಕುಮಾರ್‌ನನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ.
ಮನುಕುಮಾರ್ ಹಾಸನದಲ್ಲಿ ಹಾರ್ಡ್ವೇರ್ ಮತ್ತು ಪ್ಲೇವುಡ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಫಾರಿನ್ನಲ್ಲಿ ಬೇಬಿ ಡಾಲ್ ಫುಲ್ ಜಾಲಿ – ನ್ಯೂ ಇಯರ್ಗೆ ಕಂಬದ ಜೊತೆ ‘ನಿವ್ವಿ’ ಕಸರತ್ತು!