ಕೋಲಾರ : ಮಾಲೂರು ತಹಶೀಲ್ದಾರ್ ರಮೇಶ್ ಕುಮಾರ್ ಅವರ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಇತ್ತೀಚೆಗಷ್ಟೇ 100 ಕೋಟಿ ಹಗರಣದ ಆರೋಪ ಹೊತ್ತಿದ್ದ ತಹಶೀಲ್ದಾರ್ ರಮೇಶ್ ಕುಮಾರ್ ವಿರುದ್ಧ ಇದೀಗ ಮಗದೊಂದು ಭಾರೀ ಅಕ್ರಮದ ಆರೋಪ ಕೇಳಿ ಬಂದಿದೆ. ಈ ಹಿಂದೆ ತಹಶೀಲ್ದಾರ್ ರಮೇಶ್ ಕುಮಾರ್ ಅವರ 100 ಕೋಟಿ ಹಗರಣವನ್ನು ಬಿಟಿವಿ ಸಮಗ್ರವಾಗಿ ಬಯಲು ಮಾಡಿತ್ತು.
ಇದೀಗ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಗಂಭೀರ ಆರೋಪ ತಹಶೀಲ್ದಾರ್ ರಮೇಶ್ ಕುಮಾರ್ ಮೇಲಿದೆ. 8 ಕೋಟಿ ಬೆಲೆಬಾಳುವ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ ಮಾಡಿ ಮಂಜೂರು ಮಾಡಲಾಗಿದೆ. ಮಾಲೂರು ತಾಲೂಕಿನ ಹುಂಗೇನಹಳ್ಳಿಯ ಸರ್ವೆ ನಂ.28ರ ಗೋಮಾಳ ಭೂಮಿ, 4 ಎಕರೆ ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ರತ್ನಮ್ಮ ಎಂಬುವವರ ಹೆಸರಿಗೆ ನಕಲಿ ಸಾಗುವಳಿ ಕಡತಗಳನ್ನು ಸೃಷ್ಟಿಸಿ ಖಾತೆ ಮಾಡಲಾಗಿದೆ. ರತ್ನಮ್ಮ ಕುಟುಂಬದ ಹೆಸರಲ್ಲಿ 6 ಎಕರೆ ಜಮೀನಿದ್ರೂ ಭೂಮಿ ಮಂಜೂರು ಮಾಡಲಾಗಿದೆ. AC ಆದೇಶ ಪ್ರತಿ ಫೈಲ್ಗಳಲ್ಲಿ ಹಾಕಿ ಬೇರೆ-ಬೇರೆ ದಾಖಲೆಗಳ ಸೃಷ್ಟಿ ಹಾಗೂ ಭಾನುವಾರ ರಜೆ ಇದ್ದರೂ ಆಫೀಸ್ಗೆ ಬಂದು ನಕಲಿ ದಾಖಲೆ ಸೃಷ್ಟಿಸಿದ ಆರೋಪ ತಹಶೀಲ್ದಾರ್ ರಮೇಶ್ ಕುಮಾರ್ ವಿರುದ್ಧ ಕೇಳಿ ಬಂದಿದೆ.
ಭೂ ರಹಿತರಿಗೆ ಸಿಗಬೇಕಿದ್ದ ಜಮೀನು ಪ್ರಭಾವಿಗಳಿಗೆ ತಹಶೀಲ್ದಾರ್ ರಮೇಶ್ ಕುಮಾರ್ ನೀಡಿದ್ದಾರೆ. ಹಣದ ಆಸೆಗೆ ಪ್ರಭಾವಿಗಳಿಗೆ ಮಂಜೂರು ಮಾಡಿ ಕರ್ತವ್ಯಲೋಪ ಎಸಗಿದ್ದಾರೆ. ತಹಶೀಲ್ದಾರ್ ರಮೇಶ್, RI, VA ಸೇರಿ ಹಲವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
KIADBಗೆ ಜಮೀನು ಹೋಗುವ ಹಿನ್ನೆಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದು ಕೋಟಿ ಕೋಟಿ ಹಣ ಮಾಡಲು ಅಕ್ರಮ ಖಾತೆ ಮಾಡಿರುವ ಆರೋಪ ಇದೆ. ಇದೇ ರೀತಿ ಮಾಲೂರು ತಾಲೂಕಿನಲ್ಲಿ ಹಲವು ಅಕ್ರಮಗಳನ್ನು ಎಸಗಿರುವ ಗಂಭೀರ ಆರೋಪ ತಹಶೀಲ್ದಾರ್ ರಮೇಶ್ ಕುಮಾರ್ ಮೇಲಿದೆ. ಬಗರ್ ಹುಕುಂ ಭೂಮಿ ವಿಚಾರದಲ್ಲಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ರು. ಆದ್ರೂ ತಹಶೀಲ್ದಾರ್ ರಮೇಶ್ ಕುಮಾರ್ ಬುದ್ದಿ ಕಲಿಯದೇ ಅಕ್ರಮದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ : ಪ್ರೇಯಸಿ ಮನೆಯಿಂದ ಹಿಂತಿರುಗುವಾಗ ದುಷ್ಕರ್ಮಿಗಳ ಅಟ್ಯಾಕ್ – ಬಾಡಿ ಬಿಲ್ಡರ್ ಅಟ್ಟಾಡಿಸಿ ಬರ್ಬರ ಹತ್ಯೆ..!