ಕೇರಳ : ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಸಂಭವಿಸುವ ಮಕರ ಜ್ಯೋತಿಯನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಭಕ್ತರು ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಮಕರ ಜ್ಯೋತಿ ದರ್ಶನ ಪಡೆದರು. ಸ್ವಾಮಿ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಸಂಜೆ 6:45 ಕ್ಕೆ ಮಕರ ಜ್ಯೋತಿ ದರ್ಶನವಾಯಿತು.
6.47ಕ್ಕೆ ಮೊದಲ ಜ್ಯೋತಿ ಕಾಣಿಸಿಕೊಂಡಿದ್ದು, ಸೆಕೆಂಡುಗಳ ನಂತರ ಮತ್ತೆ ಎರಡು ಬಾರಿ ಪ್ರಜ್ವಲಿಸಿತು. ಶಬರಿಮಲೆಯಿಂದ 4 ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿಯ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಜ್ಯೋತಿಯ ಬೆಳಕನ್ನು ನೋಡಿ ಕಣ್ತುಂಬಿಕೊಂಡರು.
ಕೇರಳದ ಪವಿತ್ರ ಸ್ಥಳವಾದ ಅಯ್ಯಪ್ಪ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ಆಯೋಜನೆಗೊಂಡಿದ್ದವು. ಇನ್ನು ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಮಹಾಮಂಗಳಾರತಿ ವೇಳೆಗೆ ಜ್ಯೋತಿರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಂಡಿದ್ದಾರೆ.
ಮಕರಜ್ಯೋತಿ ವೀಕ್ಷಣೆಗೆ ಶಬರಿಮಲೆ ಆಸುಪಾಸಿನ ಹಲವು ಕೇಂದ್ರಗಳಲ್ಲಿ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷಕ್ಕೂ ಅಧಿಕ ಅಯ್ಯಪ್ಪ ಭಕ್ತರು ಮಕರ ಜ್ಯೋತಿ ದರ್ಶನ ಪಡೆದುಕೊಂಡರು. ಶಬರಿಮಲೆ ಕ್ಷೇತ್ರ ವ್ಯಾಪ್ತಿಯ ತಿರುಮುಟ್ಟಂ, ಮಲಿಕಪ್ಪುರಂ ದೇವಸ್ಥಾನ, ಅನ್ನದಾನ ಮಂಟಪ, ಪಂಡಿತವಲಂ, ದಾನಿಗಳ ಮನೆಯ ಮುಂಭಾಗದ ಅಂಗಳ, ದಹನ ಮಾಡುವ ಪ್ರದೇಶ, ಪಂಡಿತಾವಲಂನಲ್ಲಿರುವ ನೀರಿನ ಟ್ಯಾಂಕ್, ಹೋಟೆಲ್ ಹಿಂಭಾಗದ ವಿಸ್ತಾರವಾದ ಮೈದಾನ, ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ, ಕೊಪ್ಪಕ್ಕಲಂ (ಕೊದ್ರಾ ಕ್ಷೇತ್ರ), ಜ್ಯೋತಿ ನಗರ, ಅರಣ್ಯ ಕಚೇರಿ ಆವರಣ ಮತ್ತು ಜಲ ಪ್ರಾಧಿಕಾರ ಕಚೇರಿ ಆವರಣದಲ್ಲಿ ಮಕರ ಜ್ಯೋತಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಇದನ್ನೂ ಓದಿ : ಲಕ್ಷ ಲಕ್ಷ ಭಕ್ತರಿಗೆ ನಿರಾಸೆ.. ಇತಿಹಾಸದಲ್ಲಿ 3ನೇ ಬಾರಿ ಗವಿಗಂಗಾಧರನಿಗೆ ನಮಸ್ಕರಿಸದ ಭಾಸ್ಕರ..!