ಬೆಂಗಳೂರು : ಮೈಸೂರು ನಗರಾಭಿವೃದ್ಧಿ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಬೆನ್ನಲ್ಲೇ ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದೆ.
ಮುಡಾ ಹಗರಣ ಸಂಬಂಧ ಆರು ವಾರಗಳ ಒಳಗಾಗಿ ಸಿಆರ್ಪಿಸಿ ಸೆ.156(3) ಅಡಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಇಂದೇ ಸಿಎಂ ಸಿದ್ದು ವಿರುದ್ಧ ಕೇಸ್ ದಾಖಲಾಗುವ ಸಾಧ್ಯತೆಯಿದೆ. ಕೋರ್ಟ್ ಈಗಾಗಲೇ FIR ದಾಖಲಿಸಿ ತನಿಖೆ ಮಾಡಲು ಆದೇಶಿಸಿದೆ. ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದ್ದು, ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ಪ್ರಕರಣ ತನಿಖೆ ಆಗುವ ಸಾಧ್ಯತೆಯಿದೆ. ಮೊದಲಿಗೆ ಕೋರ್ಟ್ ಆದೇಶದ ಕಾಪಿ ಲೋಕಾಯುಕ್ತ ಡಿಜಿಗೆ ತಲುಪಲಿದೆ. ಬಳಿಕ ಲೋಕಾಯುಕ್ತ ಡಿಜಿ ಮೈಸೂರಿನ ಎಸ್‌ಪಿಗೆ ನಿರ್ದೇಶನ ನೀಡಲಿದ್ದಾರೆ. ತದ ನಂತರ ಮೈಸೂರು ಲೋಕಾಯುಕ್ತ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲಿದ್ದಾರೆ. ಬಳಿಕ ತನಿಖೆ ಕೈಗೊಳ್ತಾರೆ.
ಸಿಎಂ ವಿರುದ್ಧ ತನಿಖೆ ಹೇಗಿರುತ್ತೆ? ಕೋರ್ಟ್ ಆದೇಶದ ಬಳಿಕ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಲಿದೆ. ನಂತರ ಮುಡಾ ಹಗರಣದ ಆರೋಪಗಳ ಆಧಾರದ ಮೇಲೆ ಸಿಎಂಗೆ ನೋಟಿಸ್ ಜಾರಿ ಮಾಡಲಾಗುತ್ತೆ. ತನಿಖಾ ತಂಡ ರಚನೆಯಾದ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುತ್ತೆ. ವಿಚಾರಣೆಗೆ ಹಾಜರಾದಾಗ ಪ್ರಾಥಮಿಕ ಹಂತದ ಹೇಳಿಕೆ ದಾಖಲು ಮಾಡಲಾಗುತ್ತದೆ. ನಂತರ ಕೇಸ್ ಸಂಬಂಧ ಅವಶ್ಯಕತೆ ಇರುವವರಿಗೂ ನೋಟಿಸ್ ಜಾರಿ ಮಾಡುವುದಕ್ಕೆ ಅವಕಾಶಗಳಿವೆ. ಹಂತ ಹಂತವಾಗಿ ನೋಟಿಸ್ ಜಾರಿ ಮಾಡುವ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸಿಎಂ ಪತ್ನಿ, ಬಾಮೈದ, ಇತರೆ ಆರೋಪಿಗಳು, ಅಧಿಕಾರಿಗಳಿಗೂ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ವಿಚಾರಣೆ ಹಾಗೂ ತನಿಖೆಯ ವೇಳೆ ಸಿಗುವ ಸಾಕ್ಷ್ಯಗಳನ್ನ ಕಲೆ ಹಾಕಲಾಗುತ್ತೆ. ಸಾಕ್ಷ್ಯ ಹಾಗೂ ಹೇಳಿಕೆಗಳ ಆಧಾರದ ಮೇಲೆ ತನಿಖೆ ಮುಂದುವರಿಸಲಾಗುತ್ತೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ – ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ದಾರುಣ ಸಾವು..!